ಸದ್ಯ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಈಗಾಗಲೇ ಪ್ಲೇಆಫ್ ಸುತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್ ಹಾಗೂ ಸನ್ ರೈಸರ್ಸ್ ಹೈದರಬಾದ್ ತಂಡಗಳು ಆಯ್ಕೆಗೊಂಡಿವೆ.
ಉಳಿದ ಒಂದು ಸ್ಥಾನಕ್ಕಾಗಿ ಎಲಿಮಿನೇಟ್ ಆದ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಹೊರತುಪಡಿಸಿ ಉಳಿದ ಐದು ತಂಡಗಳ ನಡುವೆ ಪೈಪೋಟಿ ಇದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧವೇನಾದರೂ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ ಪ್ಲೇಆಫ್‌ಗೆ ಲಗ್ಗೆ ಇಡಲಿದೆ.
ಹೀಗೆ ಕೊನೆಯ ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಕಿತ್ತಾಟ ನಡೆಯುತ್ತಿದ್ದರೆ ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಏನು ನಡೆಯುತ್ತಿದೆ ಎಂಬ ಗೊಂದಲ ಅಭಿಮಾನಿಗಳನ್ನು ಕಾಡಿದೆ. ಅದರಲ್ಲಿಯೂ ಎಂಎಸ್ ಧೋನಿ ಅಭಿಮಾನಿಗಳಲ್ಲಿ ಚೆನ್ನೈ ಫ್ರಾಂಚೈಸಿ ತೆಗೆದುಕೊಂಡ ನಿರ್ಧಾರಗಳು ಭಾರೀ ನಿರಾಸೆಯನ್ನು ಉಂಟುಮಾಡಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 13 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಒಂದೇ ಒಂದು ಪಂದ್ಯದಲ್ಲಿಯೂ ಸಹ ಎಂಎಸ್ ಧೋನಿಯನ್ನು ಕಣಕ್ಕಿಳಿಸಿಲ್ಲ. ಕಾರಣ ಕೇಳಿದ್ದಕ್ಕೆ ಗಾಯದ ಸಮಸ್ಯೆ ಎಂದ ಮ್ಯಾನೇಜ್‌ಮೆಂಟ್ ಯಾವ ಪಂದ್ಯದಲ್ಲೂ ಧೋನಿಯನ್ನು ಆಡಿಸಲೇ ಇಲ್ಲ.
ಇದನ್ನು ಕಂಡ ಕ್ರಿಕೆಟ್ ಪ್ರೇಮಿಗಳು ಧೋನಿ ನಿವೃತ್ತಿಯಾಗಿಹೋಗಿದೆ ಇವರು ಗಾಯದ ಸಮಸ್ಯೆ ಹೇಳಿ ಬ್ರಾಂಡ್ ವ್ಯಾಲ್ಯೂ ಉಳಿಸಿಕೊಳ್ಳುವ ಸಲುವಾಗಿ ಧೋನಿಯನ್ನು ಮುಂದುವರಿಸುತ್ತಿದ್ದಾರೆ ಅಷ್ಟೇ ಎಂದು ಮಾತನಾಡಿಕೊಳ್ಳತೊಡಗಿದರು.
ಇದೀಗ ಈ ಸುದ್ದಿಯ ಬೆಂಕಿಗೆ ತುಪ್ಪ ಸುರಿಯುವಂತಹ ವರದಿಯನ್ನು ಕ್ರಿಕ್‌ಬ್ಲಾಗರ್ ವೆಬ್‌ಸೈಟ್ ಪ್ರಕಟಿಸಿದೆ. ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಹಾಗೂ ಎಂಎಸ್ ಧೋನಿ ನಡುವೆ ಮನಸ್ತಾಪವಿದ್ದು, ಎಲ್ಲವೂ ಸರಿ ಇಲ್ಲ ಎಂದು ವರದಿ ಮಾಡಿದೆ.
ಎಲ್ಲವೂ ಆರಂಭವಾಗಿದ್ದು ರವೀಂದ್ರ ಜಡೇಜಾರನ್ನು ರಾಜಸ್ಥಾನ್ ರಾಯಲ್ಸ್‌ಗೆ ಟ್ರೇಡ್ ಮಾಡಿ ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಕರೆ ತಂದಾಗಿನಿಂದಾಗ. ಈ ಟ್ರೇಡನ್ನು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಧೋನಿಗೆ ತಿಳಿಸದೇ ಮಾಡಿತು, ಇದರಿಂದ ಧೋನಿಗೆ ಬೇಸರವಾಯಿತು ಹಾಗೂ ಸಿಎಸ್‌ಕೆ ಜತೆ ಬಿರುಕು ಮೂಡಿತು ಎಂದು ಕ್ರಿಕ್‌ಬ್ಲಾಗರ್ ವರದಿ ಮಾಡಿದೆ. ಅಲ್ಲದೇ ಒಲ್ಲದ ಮನಸಿನಿಂದ ಧೋನಿ ಮ್ಯಾನೇಜ್‌ಮೆಂಟ್ ಜತೆ ಕಾಲ ಕಳೆಯುತ್ತಿದ್ದು, ಹೆಚ್ಚಿನ ಪಂದ್ಯಗಳಿಗೆ ಬಾರದೇ ಹೊಟೇಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಮುಖ್ಯವಾಗಿ ಈ ಆವೃತ್ತಿಯ ಬಳಿಕ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮುಂದುವರಿಯುವುದಿಲ್ಲ ಎನ್ನಲಾಗಿದೆ. ಧೋನಿಗೆ ಕ್ರಿಕೆಟ್ ಆಡುವ ವಯಸ್ಸೂ ಸಹ ಮುಗಿಯುತ್ತಾ ಬಂದಿದ್ದು, ನಿವೃತ್ತಿ ಪಡೆಯಲಿದ್ದಾರಾ ಅಥವಾ ಬೇರೆ ತಂಡದ ಪರ ಒಂದೆರಡು ಸೀಸನ್ ಅಭಿಮಾನಿಗಳಿಗೋಸ್ಕರ ಆಡಿದರೆ ಯಾವ ತಂಡದ ಪರ ಆಡಬಹುದು ಎಂಬ ಚರ್ಚೆ ಸದ್ಯ ಶುರುವಾಗಿದೆ.
ಆಟಗಾರನಾಗಿ ಅಲ್ಲದಿದ್ದರೂ ಮೆಂಟರ್ ಅಥವಾ ಕೋಚ್ ಆಗಿಯಾದರೂ ಧೋನಿ ಬೇರೆ ತಂಡದ ಪರ ಕೆಲಸ ಮಾಡುವುದಂತೂ ಪಕ್ಕಾ.

