ದೆಹಲಿಯಲ್ಲಿ ಬಡವರ ಆರೋಗ್ಯ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಆದೇಶಗಳನ್ನು ಹೊರಡಿಸಿದೆ. “ಸಾಮಾನ್ಯರಿಗೆ ಚಿಕಿತ್ಸೆ ಮರೀಚಿಕೆಯಾಗಬಾರದು” ಎಂದು ಖಡಕ್ಕಾಗಿ ಹೇಳಿರುವ ನ್ಯಾಯಾಲಯ, ಸರ್ಕಾರದ ಸಬ್ಸಿಡಿಗಳು ಮತ್ತು ರಿಯಾಯಿತಿ ದರದಲ್ಲಿ ಭೂಮಿಯನ್ನು ಪಡೆದ ಖಾಸಗಿ ಆಸ್ಪತ್ರೆಗಳು ಬಡ ರೋಗಿಗಳಿಗೆ ಉಚಿತ ಸೇವೆಗಳನ್ನು ಕಡ್ಡಾಯವಾಗಿ ನೀಡಲೇಬೇಕೆಂದು ಸ್ಪಷ್ಟಪಡಿಸಿದೆ.
ಈ ಹಿಂದೆ ನೀಡಿದ ತೀರ್ಪುಗಳನ್ನು ಪಾಲಿಸದ ಆಸ್ಪತ್ರೆಗಳ ಆಡಳಿತ ಮಂಡಳಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದ ಖಾಸಗಿ ಆಸ್ಪತ್ರೆಗಳು ಬಡ ರೋಗಿಗಳಿಗೆ 10% ಇನ್‌ಪೇಷೆಂಟ್ (IPD) ಹಾಸಿಗೆಗಳು ಮತ್ತು 25% ಔಟ್‌ಪೇಷೆಂಟ್ (OPD) ಸೇವೆಗಳನ್ನು ಸಂಪೂರ್ಣ ಉಚಿತವಾಗಿ ನೀಡಬೇಕು.ಈ ಉಚಿತ ಸೇವೆಯಲ್ಲಿ ಔಷಧಗಳು, ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಆಸ್ಪತ್ರೆಯ ಎಲ್ಲಾ ಶುಲ್ಕಗಳು ಸೇರಿರಬೇಕು. ಬಡವಸ್ತಿಗಳ ಸಮೀಪದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿಕೊಂಡು, ಅವರಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ದೆಹಲಿ ಆಸ್ಪತ್ರೆಗಳಲ್ಲಿ ಏನಾಯಿತು ? ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EWS) ಉಚಿತ ಚಿಕಿತ್ಸೆಯನ್ನು ಜಾರಿಗೆ ತರಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ರೂಪಿಸುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.ಈ ಹಿಂದೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಯಾದ 51 ಆಸ್ಪತ್ರೆಗಳಲ್ಲಿ ಕೇವಲ 4 ಆಸ್ಪತ್ರೆಗಳು ಮಾತ್ರ ನಿಯಮಗಳನ್ನು ಪಾಲಿಸುತ್ತಿವೆ ಎಂದು ನ್ಯಾಯಾಲಯ ಗಮನಿಸಿದೆ. ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜರಿಯಾ ಅವರ ಪೀಠವು ಈ ಆದೇಶವನ್ನು ನೀಡಿದೆ.
ನ್ಯಾಯಾಲಯದ ಗಮನಕ್ಕೆ ಬಂದ ಅಂಶಗಳು
- ಅಮಿಕಸ್ ಕ್ಯೂರಿ ವರದಿ: ಸುಪ್ರೀಂ ಕೋರ್ಟ್ ನೇಮಿಸಿದ ಅಮಿಕಸ್ ಕ್ಯೂರಿ (ಹಿರಿಯ ವಕೀಲರಾದ ಸಂಜಯ್ ಜೈನ್ ಮತ್ತು ವಕೀಲ ನಿನಾದ್ ಲಾಡ್) ಮೇ 10, 2026 ರಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ದೆಹಲಿ ನಗರ ವಸತಿ ಸುಧಾರಣಾ ಮಂಡಳಿ (DUSIB) ಮತ್ತು ಡಿಡಿಎ ಅಧಿಕೃತ ಕಾಲೋನಿಗಳ ಬಳಿ ಇರುವ ಬಡವರ ಡೇಟಾ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ.
- ನಿಯಮ ಉಲ್ಲಂಘನೆ: 51 ಆಸ್ಪತ್ರೆಗಳಲ್ಲಿ ಕೇವಲ ಅಮರ್ ಜ್ಯೋತಿ ಆಸ್ಪತ್ರೆ, ಭಗವತಿ ಆಸ್ಪತ್ರೆ, ವೇಣು ಐ ಇನ್‌ಸ್ಟಿಟ್ಯೂಟ್ ಮತ್ತು ಜಿಯೋದಯ ಆಸ್ಪತ್ರೆ ಮಾತ್ರ ನಿಯಮಗಳನ್ನು ಪಾಲಿಸುತ್ತಿವೆ.
- ಮುಂದಿನ ಕ್ರಮ: ಉಚಿತ ಚಿಕಿತ್ಸಾ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರಿ ಅಧಿಕಾರಿಗಳು, ಭೂ ಮಾಲೀಕತ್ವದ ಸಂಸ್ಥೆಗಳು ಮತ್ತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ನಡೆಸುವಂತೆ ನ್ಯಾಯಾಲಯ ಸೂಚಿಸಿದೆ. ಈ ತೀರ್ಪು ದೇಶಾದ್ಯಂತ ಇರುವ ನೂರಾರು ಖಾಸಗಿ ಆಸ್ಪತ್ರೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

