ಕಲಬುರಗಿ: ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅವರಿಂದ 15 ಸಾವಿರ ರೂಪಾಯಿ ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯನಿವರ್ಹಣಾಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕನಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ತಲಾ 4 ವರ್ಷ ಸಜೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿದೆ.
ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಅಶೋಕ ರೆಡ್ಡಿ ಮತ್ತು ಎಸ್.ಡಿ.ಎ. ನಿಜಲಿಂಗಪ್ಪ ಪಂಡಿತ್ ಶಿಕ್ಷೆಗೊಳಗಾದವರು.
ಕಲಬುರಗಿ ತಾಲೂಕು ಕಿನ್ನಿಸಡಕ ಪಂಚಾಯಿತಿ ಪಿಡಿಒ ಶರಣಗೌಡ ಕವಿತಾಳ ಅವರು ಜೇವರ್ಗಿ ತಾಲೂಕಿನ ಹುಲ್ಲೂರ ಪಂಚಾಯಿತಿಗೆ ವರ್ಗಾವಣೆಯಾಗಿದ್ದರು. ಅವರ ಸರ್ವಿಸ್ ಬುಕ್ ಕೊನೆಯ ವೇತನ ಪ್ರಮಾಣ ಪತ್ರವನ್ನು ಜೇವರ್ಗಿ ತಾಲೂಕು ಪಂಚಾಯಿತಿಗೆ ಕಳುಹಿಸಬೇಕಿತ್ತು. ಇದಕ್ಕಾಗಿ ಕಲಬುರಗಿ ತಾಲೂಕು ಪಂಚಾಯಿತಿಯ ಆಗಿನ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅಶೋಕ ರೆಡ್ಡಿ ಮತ್ತು ಎಸ್.ಡಿ.ಎ. ನಿಜಲಿಂಗಪ್ಪ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
2019ರ ಮೇ 10ರಂದು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಇನ್ಸ್ಪೆಕ್ಟರ್ ಕೆ.ಎಸ್. ಕಲ್ಲದೇವರು ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಕೋರ್ಟ್ ನ್ಯಾಯಾಧೀಶ ಜಿ.ಎಲ್. ಲಕ್ಷ್ಮಿ ನಾರಾಯಣ ಅವರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ಎಸ್. ಚಾಂದಕವಠೆ ವಾದ ಮಂಡಿಸಿದ್ದರು.

