ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಿಗೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಿರ್ಬಂಧ ಹೇರಲಿದೆ. ಈ ಕುರಿತು ಸರ್ಕಾರದ ಕಾರ್ಯದರ್ಶಿ,ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನ ಸೌಧ ಬರೆದಿರುವ ಪತ್ರ ವೈರಲ್ ಆಗಿದೆ.
ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ ಇವರಿಗೆ ಸರ್ಕಾರದ ಅಧೀನ ಕಾರ್ಯದರ್ಶಿ ಸಿಆಸುಇ (ಕಾರ್ಯಕಾರಿ) ಬರೆದಿರುವ ಪತ್ರವು ಮಾಧ್ಯಮದವರು ವಿಧಾನಸೌಧ ಕಟ್ಟಡದಲ್ಲಿ ಅವರಿಗೆ ನಿಗದಿಪಡಿಸಲಾದ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡುವಂತೆ ನಿರ್ದೇಶನ ನೀಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಪತ್ರದ ವಿವರ: ಈ ವಿಷಯಕ್ಕೆ ಸಂಬಂಧಿಸಿದಂತೆ ಸದರಿ ಪತ್ರದಲ್ಲಿನ ಕೋರಿಕೆಯ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಶಿಫಾರಸ್ಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಸಿಆಸು ಇಲಾಖೆ (ಕಾರ್ಯಕಾರಿಯಲ್ಲಿ ಗುರುತಿನ ಚೀಟಿ ವಿತರಿಸಲಾಗುತ್ತಿದೆ.
ಈ ರೀತಿಗುರುತಿನ ಚೀಟಿ ಹೊಂದಿರುವ ಎಲ್ಲಾ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ಮಾತ್ರ ಬೈಟ್/ ಹೇಳಿಕೆಗಳನ್ನು ಪಡೆದುಕೊಳ್ಳುವಂತೆ ಹಾಗೂ ವಿಧಾನಸೌಧ ಒಳ ಪ್ರವೇಶಿಸುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು/ ಮಾನ್ಯ ಉಪ ಮುಖ್ಯಮಂತ್ರಿಗಳು/ ಮಾನ್ಯ ಸಚಿವರುಗಳು/ ಗಣ್ಯ ವ್ಯಕ್ತಿಗಳಿಂದ ಬೈಟ್ ತೆಗೆದುಕೊಳ್ಳಲು ಹಿಂಬಾಲಿಸದಂತೆ ಸೂಕ್ತ ಸಲಹೆ/ ಸೂಚನೆಗಳನ್ನು ನೀಡುವಂತೆ ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ.
ಜೆಡಿಎಸ್ ಆಕ್ರೋಶ: ಈ ಪತ್ರಕ್ಕೆ ಪ್ರತಿಪಕ್ಷ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ‘ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ನಡುಕವೇ?.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.
‘ಸಚಿವರು, ಶಾಸಕರ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಭಯವೇಕೆ?. ಮಾಧ್ಯಮಗಳ ಧ್ವನಿ ಅಡಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆಯಲ್ಲವೇ ಸಿದ್ದರಾಮಯ್ಯ ಅವರೇ?’ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
‘ಸಂವಿಧಾನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸಮಾಜವಾದಿ ಮುಖವಾಡ ತೊಟ್ಟ ಮಜವಾದಿಗೆ ಇಂದು ನಡುಕ ಶುರುವಾಗಿದೆ. ಸರ್ಕಾರದ ಹಗರಣಗಳು, ಕಮಿಷನ್, ಟ್ರಾನ್ಸ್ ಫರ್ ದಂಧೆ, ಅಕ್ರಮಗಳು ಬಯಲಾಗುತ್ತವೆ ಎಂಬ ಆತಂಕದಿಂದ ಮಾಧ್ಯಮಗಳ ಸ್ವಾತಂತ್ರ್ಯ ಕಸಿಯಲು ಮುಂದಾಗಿದೆ’ ಎಂದು ಪಕ್ಷ ದೂರಿದೆ.
‘ಇದು ಪ್ರಜಾಪ್ರಭುತ್ವದ ಆಶಯದ ಮೇಲೆ ಪ್ರಹಾರವಾಗಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಮುಖ್ಯಮಂತ್ರಿಗಳೇ, ಸತ್ಯವನ್ನು ಮುಚ್ಚಿಡಲು ಗೋಡೆಗಳನ್ನು ಕಟ್ಟುವುದು ಬಿಟ್ಟು, ಪಾರದರ್ಶಕ ಆಡಳಿತ ನೀಡಿ’ ಎಂದು ಸಲಹೆ ನೀಡಿದೆ.

