ನಿನ್ನೆ ( ಏಪ್ರಿಲ್ 27 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್ಗಳ ಅಬ್ಬರದ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಬೌಲಿಂಗ್ ಆರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 16.3 ಓವರ್ಗಳಲ್ಲಿ 75 ರನ್ಗೆ ಆಲ್ಔಟ್ ಆಗಿ ಆರ್ಸಿಬಿಗೆ 76 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.3 ಓವರ್ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ನ ಎರಡನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಮಾಡಿತು. ಭುವನೇಶ್ವರ್ ಕುಮಾರ್ ಎಸೆದ ಎಸೆತಕ್ಕೆ ಸಹಿಲ್ ಪರಾಖ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಬೆನ್ನಲ್ಲೇ ಕೆಎಲ್ ರಾಹುಲ್ 1 ರನ್, ಸಮೀರ್ ರಿಜ್ವಿ ಡಕ್ಔಟ್, ಟ್ರಿಸ್ಟನ್ ಸ್ಟಬ್ಸ್ 5, ಅಕ್ಷರ್ ಪಟೇಲ್ ಡಕ್ಔಟ್ ಹಾಗೂ ನಿತಿಶ್ ರಾಣಾ ಕೇವಲ 1 ರನ್ ಗಳಿಸಿ ಔಟ್ ಆದರು. ಈ ಮೂಲಕ ಕೇವಲ 8 ರನ್ಗೆ ಡೆಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಅಲ್ಲಿಗೆ ಎಲ್ಲರ ಚಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದ ಅತಿಕಡಿಮೆ ರನ್ ದಾಖಲೆ ಮೇಲೆ ನೆಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 49ರೊಳಗೆ ಕಟ್ಟಿಹಾಕಿ ಆರ್ಸಿಬಿ ತನ್ನ ಕೆಟ್ಟ ದಾಖಲೆಯನ್ನು ಅಳಿಸಿಹಾಕುತ್ತಾ ಎಂಬ ಕುತೂಹಲ ಮೂಡಿತ್ತು.
ಆದರೆ ಏಳನೇ ಜತೆಯಾದ ಡೇವಿಡ್ ಮಿಲ್ಲರ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೊರೆಲ್ ಹಾಗೂ ಡೇವಿಡ್ ಮಿಲ್ಲರ್ 35 ರನ್ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 47ಕ್ಕೆ ತಂದರು. ಮಿಲ್ಲರ್ 19 ರನ್ ಗಳಿಸಿ ಔಟ್ ಆದರೆ ಬಳಿಕ ಒಂದಾದ ಪೊರೆಲ್ ಹಾಗೂ ಜೇಮಿಸನ್ ಜೋಡಿ ತಂಡದ ಮೊತ್ತವನ್ನು 49 ರನ್ ದಾಟಿಸಿ ಕೆಟ್ಟ ದಾಖಲೆಯಿಂದ ತಂಡವನ್ನು ಪಾರು ಮಾಡಿದರು.
ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಕೆಟ್ಟ ದಾಖಲೆಯಿಂದ ಪಾರಾದ ಕೂಡಲೇ ಎಕ್ಸ್ ಹಾಗೂ ಇನ್ಸ್ಟಾಗ್ರಾಮ್ಗಳಲ್ಲಿ ಆರ್ಸಿಬಿಯ 49 ರನ್ ಆಲ್ಔಟ್ ಇನ್ನಿಂಗ್ಸ್ನ ವಿಡಿಯೊಗಳು ಸದ್ದು ಮಾಡಿವೆ. ಹೀಗೆ ಮತ್ತೆ ವೈರಲ್ ಆಗಿರುವ ಆರ್ಸಿಬಿಯ ಆ ಇನ್ನಿಂಗ್ಸ್ ಹೇಗಿತ್ತು ಹಾಗೂ ಆ ದಿನ ಯಾವ ಆಟಗಾರ ಎಷ್ಟು ರನ್ ಬಾರಿಸಿದ್ದ ಎಂಬ ಮಾಹಿತಿ ಮುಂದಿದೆ.
2017ರ ಐಪಿಎಲ್ನ ಲೀಗ್ ಹಂತದ 27ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 19.3 ಓವರ್ಗಳಲ್ಲಿ 131 ರನ್ಗೆ ಆಲ್ಔಟ್ ಆಗಿ ಆರ್ಸಿಬಿಗೆ 132 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆರ್ಸಿಬಿ 9.4 ಓವರ್ಗಳಲ್ಲಿ 49 ರನ್ ಗಳಿಸಿ ಆಲ್ಔಟ್ ಆಯಿತು.
ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ನಾಯಕ ವಿರಾಟ್ ಕೊಹ್ಲಿ ಡಕ್ಔಟ್ ಆದರೆ, ಬೆನ್ನಲ್ಲೇ ಮನ್ದೀಪ್ ಸಿಂಗ್ 1, ಎಬಿ ಡಿ ವಿಲಿಯರ್ಸ್ 8, ಕೇದಾರ್ ಜಾಧವ್ 9 ಹಾಗೂ ಕ್ರಿಸ್ ಗೇಲ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಸ್ಟುವರ್ಟ್ ಬಿನ್ನಿ 8, ಪವನ್ ನೇಗಿ 2, ಸ್ಯಾಮುವೆಲ್ ಬದ್ರಿ ಡಕ್ಔಟ್, ಟೈಮಲ್ ಮಿಲ್ಸ್ 2, ಯುಜ್ವೇಂದ್ರ ಚಹಲ್ ಡಕ್ಔಟ್ ಹಾಗೂ ಶ್ರೀನಾಥ್ ಅರವಿಂದ್ ಅಜೇಯ 5 ರನ್ ಗಳಿಸಿದ್ದರು. ಹೀಗೆ ಆಟಗಾರರ ಒಟ್ಟು ಮೊತ್ತ 42 ರನ್ ಹೊಂದಿದ್ದ ಆರ್ಸಿಬಿ ಎಕ್ಸ್ಟ್ರಾ 7 ರನ್ ಸೇರಿದಂತೆ 49 ರನ್ ಕಲೆಹಾಕಿತ್ತು.

