ಬೆಂಗಳೂರು: ಜಾಗತಿಕ ರಾಜಕೀಯದಲ್ಲಿ ಬದಲಾಗುತ್ತಿರುವ ಗಾಳಿಯ ದಿಕ್ಕನ್ನು ಅರಿತಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI), ವಿದೇಶಿ ಬ್ಯಾಂಕುಗಳಲ್ಲಿಟ್ಟಿದ್ದ ತನ್ನ ಚಿನ್ನದ ನಿಕ್ಷೇಪವನ್ನು ಸದ್ದಿಲ್ಲದೆ ಭಾರತಕ್ಕೆ ಮರಳಿ ತರುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಆರ್‌ಬಿಐ ಕೈಗೊಂಡಿರುವ ಈ ನಿರ್ಧಾರ ಭಾರತದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ಅಂಕಿ-ಅಂಶಗಳಲ್ಲಿದೆ ಅಸಲಿ ಕಥೆ
ಆರ್‌ಬಿಐ ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, ಭಾರತದ ಚಿನ್ನದ ಸಂಗ್ರಹದಲ್ಲಿ ಭಾರಿ ಏರಿಕೆಯಾಗಿದೆ:
ಮಾರ್ಚ್ 2026: ಒಟ್ಟು ಚಿನ್ನ 880.52 ಮೆಟ್ರಿಕ್ ಟನ್. ಇದರಲ್ಲಿ 680.05 ಟನ್ ಈಗ ಭಾರತದಲ್ಲೇ (ದೇಶೀಯ ಮೀಸಲು) ಸುರಕ್ಷಿತವಾಗಿದೆ.
ಒಂದೇ ವರ್ಷದಲ್ಲಿ ಬದಲಾವಣೆ: 2025ರಲ್ಲಿ ಭಾರತದಲ್ಲಿದ್ದ ಚಿನ್ನ 511.99 ಟನ್ ಮಾತ್ರ. ಅಂದರೆ ಕೇವಲ 12 ತಿಂಗಳಲ್ಲಿ ಬರೋಬ್ಬರಿ 168 ಮೆಟ್ರಿಕ್ ಟನ್ ಚಿನ್ನವನ್ನು ವಿದೇಶದಿಂದ ಭಾರತಕ್ಕೆ ತರಲಾಗಿದೆ!
ವಿದೇಶದಿಂದ ಚಿನ್ನ ವಾಪಸ್ ತರುತ್ತಿರುವುದೇಕೆ?
ಯುದ್ಧ ಮತ್ತು ರಾಜಕೀಯ ಬಿಕ್ಕಟ್ಟು: ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಅಮೆರಿಕವು ರಷ್ಯಾದ ವಿದೇಶಿ ಮೀಸಲುಗಳ ಮೇಲೆ ನಿರ್ಬಂಧ ಹೇರಿತ್ತು. ಇಂತಹ ಅಪಾಯ ನಮಗೂ ಬರಬಾರದೆಂಬ ಮುನ್ನೆಚ್ಚರಿಕೆಯಿಂದ ಆರ್‌ಬಿಐ ಈ ಹೆಜ್ಜೆ ಇಟ್ಟಿದೆ.
ಶುಲ್ಕ ಉಳಿತಾಯ: ಇಂಗ್ಲೆಂಡ್‌ನ ಬ್ಯಾಂಕ್ ಆಫ್ ಇಂಗ್ಲೆಂಡ್ (BoE) ನಂತಹ ಬ್ಯಾಂಕುಗಳಲ್ಲಿ ಚಿನ್ನ ಇಡಲು ಭಾರತ ಭಾರಿ ಮೊತ್ತದ ಶುಲ್ಕ ನೀಡಬೇಕಿತ್ತು. ಈಗ ಆ ಹಣ ಉಳಿತಾಯವಾಗಲಿದೆ.
ಆರ್ಥಿಕ ಸ್ವತಂತ್ರ: 1991ರಲ್ಲಿ ಸಾಲಕ್ಕಾಗಿ ಚಿನ್ನವನ್ನು ಗಿರವಿ ಇಟ್ಟಿದ್ದ ಪರಿಸ್ಥಿತಿ ಈಗಿಲ್ಲ. ಇಂದು ಭಾರತದ ವಿದೇಶಿ ಮೀಸಲು $691 ಬಿಲಿಯನ್ ದಾಟಿದ್ದು, ನಾವು ಆರ್ಥಿಕವಾಗಿ ಬಲಿಷ್ಠವಾಗಿದ್ದೇವೆ.
ಚಿನ್ನದ ಬೆಲೆಯ ಮೇಲೆ ಏನು ಪರಿಣಾಮ?
ವಿಶ್ವದಾದ್ಯಂತ ಕೇಂದ್ರ ಬ್ಯಾಂಕುಗಳು ಚಿನ್ನದ ಖರೀದಿಯನ್ನು ಹೆಚ್ಚಿಸಿವೆ. 2024-25ರಲ್ಲಿ ದಾಖಲೆ ಮಟ್ಟದ ಚಿನ್ನ ಖರೀದಿಯಾಗಿದೆ. ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಎಲ್ಲ ದೇಶಗಳು ಚಿನ್ನದತ್ತ ಮುಖ ಮಾಡುತ್ತಿವೆ. ಈ ಅಧಿಕೃತ ಬೇಡಿಕೆಯು ದೀರ್ಘಕಾಲದವರೆಗೆ ಚಿನ್ನದ ಬೆಲೆಗೆ ಒಂದು ಭದ್ರವಾದ ಅಡಿಪಾಯ ಒದಗಿಸಲಿದೆ.

