HomeLatest News'ರಾಜೇಶ್ ಖನ್ನಾ 10 ಬಾರಿ ಡೈವೋರ್ಸ್ ಕೇಳಿದ್ರೂ ಡಿಂಪಲ್ ಕೊಡಲಿಲ್ಲ': ಅನಿತಾ ಅಡ್ವಾಣಿ ಸ್ಪೋಟಕ ಹೇಳಿಕೆ!

‘ರಾಜೇಶ್ ಖನ್ನಾ 10 ಬಾರಿ ಡೈವೋರ್ಸ್ ಕೇಳಿದ್ರೂ ಡಿಂಪಲ್ ಕೊಡಲಿಲ್ಲ’: ಅನಿತಾ ಅಡ್ವಾಣಿ ಸ್ಪೋಟಕ ಹೇಳಿಕೆ!

ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ದಿವಂಗತ ರಾಜೇಶ್ ಖನ್ನಾ ಅವರ ನಿಧನದ ವರ್ಷಗಳ ನಂತರವೂ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿವಾದಗಳು ತಣ್ಣಗಾಗಿಲ್ಲ. ಇದೀಗ ರಾಜೇಶ್ ಖನ್ನಾ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಅನಿತಾ ಅಡ್ವಾಣಿ, ನಟನ ವೈಯಕ್ತಿಕ ಜೀವನ ಹಾಗೂ ಕಾನೂನು ಹೋರಾಟದ ಕುರಿತು ಮತ್ತೊಮ್ಮೆ ಹಲವು ಸ್ಪೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನಿತಾ, ರಾಜೇಶ್ ಖನ್ನಾ ತಮ್ಮ ಪತ್ನಿ ಡಿಂಪಲ್ ಕಪೂಡಿಯಾ ಅವರಿಂದ ವಿಚ್ಛೇದನ ಪಡೆಯಲು ಸಾಕಷ್ಟು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ. 1973ರಲ್ಲಿ 16 ವರ್ಷದ ಡಿಂಪಲ್ ಕಪೂಡಿಯಾ ಅವರನ್ನು ಮದುವೆಯಾಗಿದ್ದ ರಾಜೇಶ್ ಖನ್ನಾ, 1982ರಲ್ಲೇ ಅವರಿಂದ ದೂರವಾಗಿದ್ದರು. ಆದರೆ ಅವರಿಬ್ಬರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದುಕೊಂಡಿರಲಿಲ್ಲ.

“ರಾಜೇಶ್ ಖನ್ನಾ ಕನಿಷ್ಠ 10 ಬಾರಿಯಾದರೂ ಡಿಂಪಲ್ ಬಳಿ ಡೈವೋರ್ಸ್ ಕೇಳಿದ್ದರು. ಆದರೆ ಅವರು ವಿಚ್ಛೇದನ ನೀಡಲು ಒಪ್ಪಲಿಲ್ಲ. ಒಂದು ವೇಳೆ ಡೈವೋರ್ಸ್ ನೀಡಬೇಕೆಂದರೆ ಆಸ್ತಿಯನ್ನೆಲ್ಲಾ ತಮ್ಮ ಮತ್ತು ಮಕ್ಕಳ ಹೆಸರಿಗೆ ಬರೆದುಕೊಡಬೇಕು ಎಂಬ ಷರತ್ತು ವಿಧಿಸಿದ್ದರು. ಇದರಿಂದಾಗಿ ಖನ್ನಾ ಜೀವನಪೂರ್ತಿ ಕಾನೂನು ಸಂಕೋಲೆಯಲ್ಲಿ ಸಿಲುಕಿ ನೊಂದಿದ್ದರು” ಎಂದು ಅನಿತಾ ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ತಮ್ಮ ಕಾನೂನು ಹೋರಾಟದ ಬಗ್ಗೆ ಮಾತನಾಡಿದ ಅವರು, “ನನ್ನ ಪ್ರಕರಣವನ್ನು ಹಿಂದೂ ವಿವಾಹ ಕಾಯ್ದೆಯಡಿ ಪರಿಗಣಿಸಲಾಯಿತು. ಆದರೆ ನಾನು ಕೇಳಿದ್ದು ‘ಮದುವೆಯಂತಹ ಸ್ವರೂಪದ ಸಂಬಂಧ’ಕ್ಕೆ ಮಾನ್ಯತೆ. ಈ ಕಾಯ್ದೆಯಡಿ ಲಿವ್-ಇನ್ ಪಾರ್ಟ್ನರ್ ಕೂಡ ಬರುತ್ತಾರೆ. ಆದರೆ ನ್ಯಾಯಾಲಯ ಇದನ್ನು ಸರಿಯಾಗಿ ಪರಿಗಣಿಸಲಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ರಾಜೇಶ್ ಖನ್ನಾ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾ, “ಅವರು ಬಾಲ್ಯದಲ್ಲೇ ದತ್ತು ಹೋದ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದರು. ನಂತರ ಜೀವನದಲ್ಲಿ ಸ್ನೇಹಿತರು, ಆತ್ಮೀಯರಿಂದ ನಂಬಿಕೆದ್ರೋಹ ಎದುರಿಸಿದರು. ಇದರಿಂದಾಗಿ ಅವರು ಯಾರನ್ನೂ ಸುಲಭವಾಗಿ ನಂಬುತ್ತಿರಲಿಲ್ಲ ಮತ್ತು ಒಂಟಿತನದಿಂದ ಬಳಲುತ್ತಿದ್ದರು,” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

1969ರ ‘ಆರಾಧನಾ’ ಚಿತ್ರದ ನಂತರ ಸತತ ಹಿಟ್‌ಗಳನ್ನು ನೀಡಿ ಸೂಪರ್‌ಸ್ಟಾರ್ ಆದ ರಾಜೇಶ್ ಖನ್ನಾ, 1970ರ ದಶಕದ ಮಧ್ಯಭಾಗದಲ್ಲಿ ಸತತ ಸೋಲುಗಳನ್ನು ಕಂಡು ಕುಗ್ಗಿದ್ದರು. 2012ರಲ್ಲಿ ಅವರು ನಿಧನರಾಗುವವರೆಗೂ ಅನಿತಾ ಅಡ್ವಾಣಿ ಅವರೊಂದಿಗಿದ್ದರು ಎನ್ನಲಾಗಿದ್ದು, ಈ ಸಂಬಂಧದ ಕುರಿತು ಖನ್ನಾ ಕುಟುಂಬಸ್ಥರು ಮತ್ತು ಅನಿತಾ ನಡುವೆ ಕಾನೂನು ಸಮರ ನಡೆದಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular