ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಸಂಕಷ್ಟ ಎದುರಾಗಿದೆ. ಎರಡು ಎಫ್‌ಐಆರ್ ದಾಖಲಾದ ಬಳಿಕ ನಾಪತ್ತೆಯಾಗಿರುವ ಅವರು, ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವ ಪ್ರಕರಣದ ಆರೋಪಿ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪಕ್ಷದಿಂದಲೇ ಅಮಾನತು ಆಗುವ ಸಾಧ್ಯತೆ ಇದೆ.
ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಸಿಸಿ ರಾಜೀವ್ ಗೌಡಗೆ ನೋಟಿಸ್ ಜಾರಿ ಮಾಡಿತ್ತು. ಕಾರಣವನ್ನು ಕೇಳಿತ್ತು. ಆದರೆ ನೋಟಿಸ್‌ಗೆ ಇದುವರೆಗೂ ಅವರು ಉತ್ತರ ನೀಡಿಲ್ಲ.
ಆದ್ದರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿಗೆ ರಾಜೀವ್ ಗೌಡ ಅಮಾನತು ಮಾಡುವಂತೆ ಶಿಫಾರಸು ಮಾಡಿದ್ದಾರೆ. ಆದ್ದರಿಂದ ಅಮಾನತು ಆದೇಶ ಯಾವುದೇ ಕ್ಷಣದಲ್ಲಿ ಪ್ರಕಟವಾಗಬಹುದು.
ಇನ್ನೂ ಬಂಧಿಸದ ಪೊಲೀಸರು: ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿರುವ ವಿಚಾರದಲ್ಲಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ. ಇಲ್ಲಿಯ ತನಕ ಅವರನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಮೂರು ತಂಡಗಳನ್ನು ಮಾಡಿಕೊಂಡು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮಂಗಳವಾರ ರಾಜೀವ್ ಗೌಡ ಎಫ್ಐಆರ್ ರದ್ದು ಮಾಡಲು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ರಾಜೀವ್ ಗೌಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಅರ್ಜಿ ಸಂಬಂಧ ಆದೇಶ ಕಾಯ್ದಿರಿಸಿತು.
ನೋಟಿಸ್ ವಿವರ: ಕೆಪಿಸಿಸಿ ರಾಜೀವ್ ಗೌಡಗೆ ಕಾರಣ ಕೇಳಿ ನೋಟೀಸು ಜಾರಿ ಎಂಬ ವಿಷಯ ಇರುವ ನೋಟಿಸ್ ನೀಡಿತ್ತು.
ತಾವು ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮದ ಸಭೆಯೊಂದಕ್ಕೆ ಸಂಬಂಧಪಟ್ಟಂತೆ ತಾವುಗಳು ಬ್ಯಾನರ್‌ಗಳನ್ನು ನಗರಸಭೆ ವ್ಯಾಪ್ತಿಯಲ್ಲಿ ಹಾಕಿರುವುದರ ಬಗ್ಗೆ ಸದರಿ ನಗರಸಭೆ ಪೌರಾಯುಕ್ತರೊಂದಿಗೆ ದೂರವಾಣಿ ಸಂಭಾಷಣೆ ನಡೆಸುವಾಗ ವ್ಯಕ್ತಿಗತ ನಿಂದನೆ ಮಾಡಿ, ಕೆಟ್ಟ, ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿರುವ ವಿಷಯಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ.
ತಮ್ಮ ಈ ವರ್ತನೆ ಹಾಗೂ ತಾವು ಸದರಿ ನಗರಸಭೆ ಪೌರಾಯುಕ್ತರೊಂದಿಗೆ ಆಡಿರುವ ಮಾತುಗಳಿಂದ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತದೆ ಹಾಗೂ ತಾವುಗಳು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತೀರೆಂದು ತಿಳಿದು ಈ ಕಾರಣ ಕೇಳಿ ನೋಟೀಸು ನೀಡಲಾಗುತ್ತಿದೆ.
ಈ ನೋಟೀಸ್ ನೀಡಿದ ಒಂದು ವಾರದ ಒಳಗಾಗಿ ಈ ಬಗ್ಗೆ ಸೂಕ್ತ ಸಮಜಾಷಿ ನೀಡಬೇಕು, ಇಲ್ಲವಾದಲ್ಲಿ ಈ ಬಗ್ಗೆ ಶಿಸ್ತು ಸಮಿತಿಯು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.
ಜನವರಿ 15ರಂದು ಈ ನೋಟಿಸ್ ನೀಡಲಾಗಿತ್ತು. ಆದರೆ ಜನವರಿ 21ರ ತನಕ ರಾಜೀವ್ ಗೌಡ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಪತ್ತೆಯಾಗಿಲ್ಲ. ಆದ್ದರಿಂದ ಅವರನ್ನು ಪಕ್ಷದಿಂದ ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ.
ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದರೆ 6 ವರ್ಷಗಳ ತನಕ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲು ಅವಕಾಶವಿದೆ. ರಾಜೀವ್ ಗೌಡ ಪಕ್ಷದಿಂದ ಅಮಾನತುಗೊಂಡರೆ ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತಿಲ್ಲ.

