HomeKarnatakaಡಿ.ಕೆ.ಶಿವಕುಮಾರ್ ಒಂದು ಸಾಲಿನ ಸಂದೇಶ: ಬೆಂಬಲಿಗರು ಗುಪ್‌ ಚುಪ್, ಡಿನ್ನರ್ ಮೀಟಿಂಗ್ ಕ್ಯಾನ್ಸಲ್!

ಡಿ.ಕೆ.ಶಿವಕುಮಾರ್ ಒಂದು ಸಾಲಿನ ಸಂದೇಶ: ಬೆಂಬಲಿಗರು ಗುಪ್‌ ಚುಪ್, ಡಿನ್ನರ್ ಮೀಟಿಂಗ್ ಕ್ಯಾನ್ಸಲ್!

ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಬಿದ್ದಿದೆಯೇ?. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರು ತಣ್ಣಗಾಗಿದ್ದಾರೆಯೇ?. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೈಸೂರು ಭೇಟಿ ಬಳಿಕ ಚಿತ್ರಣ ಸಂಪೂರ್ಣ ಬದಲಾಗಿದೆಯೇ?.

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಹೌದು. ಸದ್ಯಕ್ಕೆ ಎಲ್ಲರೂ ಥಂಡ ಥಂಡ ಕೂಲ್ ಕೂಲ್. ನಾಯಕತ್ವ ಬದಲಾವಣೆ ವಿಚಾರ ಎತ್ತಬೇಡಿ ಎಂದು ಬೆಂಬಲಿಗರಿಗೆ ಉಭಯ ನಾಯಕರು ಸೂಚನೆ ನೀಡಿದ್ದಾರೆ.

ಮೈಸೂರಿನಲ್ಲಿ ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ, “ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಶಾಸಕರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ. ಈ ವಿಚಾರದಲ್ಲಿ ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಬೇಕು” ಎಂದು ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ನಮ್ಮ ಪಕ್ಷದ ಶಾಸಕರಿಗಿಂತ ಮಾಧ್ಯಮಗಳು ಹೆಚ್ಚು ಆಸಕ್ತಿ ತೋರುತ್ತಿವೆ” ಎಂದು ತಿಳಿಸಿದ್ದರು.

ದೆಹಲಿ ಭೇಟಿ ಬಳಿಕ ಚಿತ್ರಣ ಬದಲು: ಮೈಸೂರಿನಲ್ಲಿ ರಾಹುಲ್ ಗಾಂಧಿ ಭೇಟಿಯಾದ ಬಳಿಕ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದರು. ಮೂರು ದಿನ ಅಲ್ಲೇ ಇದ್ದ ಅವರು ಹೈಕಮಾಂಡ್ ನಾಯಕರಿಂದ ಕ್ಲಾರಿಟಿ ಪಡೆದುಕೊಂಡು ರಾಜ್ಯಕ್ಕೆ ಆಗಮಿಸಿದ್ದಾರೆ. ಆದ್ದರಿಂದ ಬೆಂಬಲಿಗರಿಗೆ ಸಹ ಅವರು ಒಂದು ಸಾಲಿನ ಸಂದೇಶನವನ್ನು ನೀಡಿದ್ದಾರೆ.

ಆದ್ದರಿಂದ ಡಿ.ಕೆ.ಶಿವಕುಮಾರ್ ಬಣದ ಶಾಸಕರು, ನಾಯಕರು ಸದ್ಯಕ್ಕೆ ನಾಯಕತ್ವ ಬದಲಾವಣೆ ಕುರಿತು ಧ್ವನಿ ಎತ್ತುವುದಿಲ್ಲ. “ಕಾದು ನೋಡೋಣ, ಪ್ರತಿಪಕ್ಷಗಳಿಗೆ ಆಹಾರ ಒದಗಿಸಬೇಡಿ” ಎಂದು ಡಿ.ಕೆ.ಶಿವಕುಮಾರ್ ಸಂದೇಶ ನೀಡಿದ್ದು, ಗುಪ್ ಚುಪ್ ಆಗಿರುವಂತೆ ಖಡಕ್ ಆಗಿ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿಗರ ಔತಣ ಕೂಟ ನಿಗದಿಯಾಗಿತ್ತು. ಮುಂದಿನ ನಡೆ ಬಗ್ಗೆ ಚರ್ಚಿಸಿ, ತೀರ್ಮಾನಿಸಲು ನಗರದ ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್ ಪಾರ್ಟಿ ಆಯೋಜನೆಯಾಗಿತ್ತು.

ಆದರೆ ಡಿ.ಕೆ.ಶಿವಕುಮಾರ್ ಸಂದೇಶದ ಬಳಿಕ ಇದನ್ನು ರದ್ದುಗೊಳಿಸಲಾಗಿದೆ.  ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರು, ನಾಯಕರು ಇಂದು ಸಭೆ ಸೇರುತ್ತಿಲ್ಲ. ನಾಯಕತ್ವ ಬದಲಾವಣೆ ಬಗ್ಗೆಯೂ ನಾಯಕರು ಮಾತನಾಡಲ್ಲ ಎಂದು ನಿರೀಕ್ಷೆ ಮಾಡಲಾಗಿದೆ.

ಅಸ್ಸಾಂ ಚುನಾವಣೆ ಕುರಿತು ಚರ್ಚೆ ನಡೆಸಲು ತೆರಳಿದ್ದ ಡಿ.ಕೆ.ಶಿವಕುಮಾರ್ ನಾಯಕತ್ವ ಬದಲಾವಣೆಯ ವಿಚಾರವನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಇದಕ್ಕೆ ಅಲ್ಲಿಂದ ಭರವಸೆ ಸಹ ಸಿಕ್ಕ ಬಳಿಕವೇ ಅವರು ಬೆಂಗಳೂರಿಗೆ ವಾಪಸ್ ಆಗಿದ್ದು, ಬೆಂಬಲಿಗರು ಅದನ್ನು ತಿಳಿಸಿದ್ದಾರೆ.

“ಹೈಕಮಾಂಡ್ ನಮ್ಮ ಪರವಾಗಿದೆ. ನಮ್ಮ ಪರವಾದ ಅಲೆ ಇದೆ. ಇಂತಹ ಸಂದರ್ಭದಲ್ಲಿ ಡಿನ್ನರ್ ಮೀಟಿಂಗ್, ಹೇಳಿಕೆಗಳ ಮೂಲಕ ಪದೇ ಪದೇ ಪ್ರತಿಪಕ್ಷಗಳಿಗೆ ಆಹಾರ ಆಗುವುದು ಬೇಡ. ಕಾದು ನೋಡೋಣ” ಎಂಬ ಸಂದೇಶವನ್ನು ಡಿ.ಕೆ.ಶಿವಕುಮಾರ್ ಕೊಟ್ಟಿದ್ದಾರೆ.

ಒಂದು ಕಡೆ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್ ಮಂಡನೆ ತಯಾರಿಯಲ್ಲಿ ತೊಡಗಿದ್ದಾರೆ. ಡಿ.ಕೆ.ಶಿವಕುಮಾರ್ ಅಸ್ಸಾಂ ಚುನಾವಣೆ, ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಮನರೇಗಾ ಹೆಸರು ಬದಲಾವಣೆ ಮಾಡಿ ವಿಜಿ ರಾಮ್‌-ಜಿ ಕಾಯ್ದೆ ಬಗ್ಗೆ ಚರ್ಚಿಸಲು ಕರ್ನಾಟಕ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಾಗಿದ್ದು, ಶುಕ್ರವಾರ ಅಧಿವೇಶನ ಪ್ರಾರಂಭವಾಗಲಿದೆ. ಒಂದು ವಾರಗಳ ಕಾಲ ಅಧಿವೇಶನ ನಡೆಯಲಿದ್ದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಟ್ಟಾಗಿ ಪಾಲ್ಗೊಳ್ಳಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular