ಉದಯ್‌ಪುರ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ ಆಮದು ವ್ಯತ್ಯಯವಾಗಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಹಾಗೂ ಕೊರತೆ ಜನಸಾಮಾನ್ಯರನ್ನು ಕಂಗಾಲು ಮಾಡಿದೆ. ಇಂತಹ ಸಮಯದಲ್ಲಿ ರಾಜಸ್ಥಾನದ ಉದಯ್‌ಪುರದ ಎಂಟನೇ ತರಗತಿ ಓದಿದ ವ್ಯಕ್ತಿಯೊಬ್ಬರು ತಯಾರಿಸಿರುವ ‘ವಿಶ್ವಗುರು ಚುಲ್ಹಾ’ ದೇಶದ ಗಮನ ಸೆಳೆಯುತ್ತಿದೆ. ಕೇವಲ 2 ಕೆಜಿ ಸೌದೆಯಲ್ಲಿ 30 ನಿಮಿಷಗಳಲ್ಲಿ 25 ಜನರಿಗೆ ಅಡುಗೆ ಸಿದ್ಧಪಡಿಸುವ ಈ ಒಲೆ, ಈಗ ಗ್ಯಾಸ್ ಸಿಲಿಂಡರ್‌ಗೆ ಪರ್ಯಾಯವಾಗಿ ಹೊರಹೊಮ್ಮುತ್ತಿದೆ.
ಈ ಆವಿಷ್ಕಾರದ ಹಿಂದೆ ಇರುವುದು ಮೊಹಮ್ಮದ್ ಶೇರ್ ಖಾನ್ ಎಂಬ ಕಬ್ಬಿಣದ ಕುಶಲಕರ್ಮಿ. ಕಳೆದ 27 ವರ್ಷಗಳಿಂದ ಕಬ್ಬಿಣದ ಕೆಲಸದಲ್ಲಿ ಅನುಭವ ಹೊಂದಿರುವ ಇವರು, ಹಳ್ಳಿಗಳಲ್ಲಿ ಮಹಿಳೆಯರು ಸೌದೆ ಒಲೆಯಲ್ಲಿ ಗಂಟೆಗಟ್ಟಲೆ ಕಷ್ಟಪಟ್ಟು ಅಡುಗೆ ಮಾಡುವುದನ್ನು ಕಂಡು ಈ ಆಧುನಿಕ ಒಲೆಯನ್ನು ವಿನ್ಯಾಸಗೊಳಿಸಿದ್ದಾರೆ. ಈ ಒಲೆಯ ವಿಶೇಷವೆಂದರೆ ಇದು ‘3 ಇನ್ 1’ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತದೆ. ಇದರಲ್ಲಿ ಏಕಕಾಲಕ್ಕೆ ಬೇಳೆ ಬೇಯಿಸಬಹುದು, ತರಕಾರಿ ಹುರಿಯಬಹುದು ಹಾಗೂ ರೊಟ್ಟಿ ಅಥವಾ ಬಾಟಿಗಳನ್ನು ಬೇಯಿಸಬಹುದು.
ವಿಶ್ವಗುರು ಚುಲ್ಹಾದ ವಿಶೇಷತೆಗಳು: ಈ ಒಲೆಯಲ್ಲಿ ಮೂರು ಹಂತಗಳ ಅಡುಗೆ ವ್ಯವಸ್ಥೆ ಇದೆ. ಮೇಲಿನ ಹಂತದಲ್ಲಿ ರೊಟ್ಟಿ, ಪಿಜ್ಜಾ ಅಥವಾ ಬ್ರೆಡ್ ತಯಾರಿಸಬಹುದು. ಮಧ್ಯದ ಹಂತದಲ್ಲಿ ತರಕಾರಿ ಅಥವಾ ಮಾಂಸವನ್ನು ಫ್ರೈ ಮಾಡಬಹುದು ಹಾಗೂ ಕೆಳಗಿನ ಹಂತದಲ್ಲಿ ಬೇಳೆ ಅಥವಾ ಸೂಪ್‌ಗಳನ್ನು ಕುದಿಸಬಹುದು. ಸಾಂಪ್ರದಾಯಿಕ ಒಲೆಗಳಿಗೆ 10 ಕೆಜಿ ಸೌದೆ ಬೇಕಾದರೆ, ಈ ಒಲೆಗೆ ಕೇವಲ 2 ಕೆಜಿ ಸೌದೆ ಸಾಕಾಗುತ್ತದೆ. ಅತಿ ಮುಖ್ಯವಾಗಿ, ಈ ಒಲೆ ಬಳಸುವಾಗ ಹೊಗೆ ಬರುವುದಿಲ್ಲ, ಇದರಿಂದ ಅಡುಗೆ ಮಾಡುವವರ ಆರೋಗ್ಯಕ್ಕೂ ಯಾವುದೇ ತೊಂದರೆಯಾಗುವುದಿಲ್ಲ.
ಈಗಾಗಲೇ ಈ ಒಲೆಗೆ ಪೇಟೆಂಟ್ ಪಡೆದಿರುವ ಶೇರ್ ಖಾನ್, ಕಳೆದ ಕೆಲವು ವರ್ಷಗಳಲ್ಲಿ ಭಾರತದಾದ್ಯಂತ 10,000ಕ್ಕೂ ಹೆಚ್ಚು ಒಲೆಗಳನ್ನು ಮಾರಾಟ ಮಾಡಿದ್ದಾರೆ. ಇದರ ಬೆಲೆ 10,000 ರೂಪಾಯಿಗಳಾಗಿದ್ದು, ಮನೆಗಳು ಮಾತ್ರವಲ್ಲದೆ ಹಾದಿಬದಿಯ ಹೋಟೆಲ್‌ಗಳು ಮತ್ತು ಸಣ್ಣ ಉದ್ಯಮಿಗಳಿಗೆ ಇದು ವರದಾನವಾಗಿದೆ. ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಈ ದೇಶಿ ಆವಿಷ್ಕಾರವು ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ.
ಯಾವುದೇ ದೊಡ್ಡ ಇಂಜಿನಿಯರಿಂಗ್ ಪದವಿ ಇಲ್ಲದಿದ್ದರೂ, ಶೇರ್ ಖಾನ್ ಅವರ ಈ ಸೃಜನಶೀಲತೆ ಇಂದು ದೇಶದ ಇಂಧನ ಬಿಕ್ಕಟ್ಟಿಗೆ ಒಂದು ಸುಲಭ ಪರಿಹಾರವಾಗಿ ತೋರುತ್ತಿದೆ. ರಾಜಸ್ಥಾನದ ಸಾಂಪ್ರದಾಯಿಕ ಭಕ್ಷ್ಯಗಳಿಂದ ಹಿಡಿದು ಆಧುನಿಕ ಪಿಜ್ಜಾವರೆಗೆ ಎಲ್ಲವನ್ನೂ ಈ ಒಲೆಯಲ್ಲಿ ತಯಾರಿಸಬಹುದು ಎಂಬುದು ಇದರ ಹೆಗ್ಗಳಿಕೆ.

