ನಾಸಿಕ್: ನೌಕಾಪಡೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಜನರ ನಂಬಿಕೆ ಮತ್ತು ಭಯವನ್ನೇ ಬಂಡವಾಳವಾಗಿಸಿಕೊಂಡು 100 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಕರಾಳ ದಂಧೆ ಈಗ ಬಯಲಾಗಿದೆ. ‘ಕ್ಯಾಪ್ಟನ್’ ಎಂದೇ ಖ್ಯಾತನಾಗಿದ್ದ 67 ವರ್ಷದ ಸ್ವಯಂಘೋಷಿತ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ ಅಶೋಕ್ ಖಾರತ್ನನ್ನು ಅತ್ಯಾಚಾರ ಪ್ರಕರಣದಲ್ಲಿ ನಾಸಿಕ್ ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಆಘಾತಕಾರಿ ವಿಷಯಗಳು ಹೊರಬರುತ್ತಿವೆ.
ಸುಮಾರು 22 ವರ್ಷಗಳ ಕಾಲ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡಿದ್ದ ಅಶೋಕ್ ಖಾರತ್, ನಿವೃತ್ತಿಯ ನಂತರ ಸಂಖ್ಯಾಶಾಸ್ತ್ರದ ಮೊರೆ ಹೋಗಿದ್ದ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಮೇಲಿನ ಹಿಡಿತ ಹಾಗೂ ನೌಕಾಪಡೆಯ ಹಿನ್ನೆಲೆಯನ್ನೇ ಬಂಡವಾಳವಾಗಿಸಿಕೊಂಡು ಶ್ರೀಮಂತರನ್ನು ಸೆಳೆಯುತ್ತಿದ್ದ. ಮೊದಮೊದಲು ಸಣ್ಣ ಮಟ್ಟದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಈತ, ನಂತರ ರಾಜಕಾರಣಿಗಳು ಮತ್ತು ಉದ್ಯಮಿಗಳ ಆಪ್ತ ಸಲಹೆಗಾರನಾಗಿ ಬದಲಾದ. ವಿಶೇಷವೆಂದರೆ, ಗಣ್ಯರ ಮನೆಗೆ ಭೇಟಿ ನೀಡಲು ಈತ ಬರೋಬ್ಬರಿ 50 ಲಕ್ಷ ರೂಪಾಯಿ ಫೀಸ್ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಾಮ್ರಾಜ್ಯದ ಪತನ ಶುರುವಾಗಿದ್ದು 27 ವರ್ಷದ ಯುವತಿ ನೀಡಿದ ದೂರಿನಿಂದ. ತನ್ನ ವೈವಾಹಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈತನ ಬಳಿ ಬಂದಿದ್ದ ಯುವತಿಯ ಮೇಲೆ ‘ನಿನ್ನ ಗಂಡನ ಜೀವಕ್ಕೆ ಅಪಾಯವಿದೆ’ ಎಂದು ಹೆದರಿಸಿ, ಪೂಜೆಯ ಹೆಸರಲ್ಲಿ ದೈಹಿಕವಾಗಿ ಶೋಷಿಸಿದ್ದಾನೆ ಎಂಬ ಗಂಭೀರ ಆರೋಪವಿದೆ. ಅಷ್ಟೇ ಅಲ್ಲದೆ, ಈತನ ಬಳಿಯಿದ್ದ ಪೆನ್ ಡ್ರೈವ್ನಲ್ಲಿ 58 ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಇವುಗಳಲ್ಲಿ ಅನೇಕ ಮಹಿಳೆಯರ ಮೇಲೆ ಅಘೋರಿ ಪೂಜೆಯ ಹೆಸರಿನಲ್ಲಿ ಕೃತ್ಯ ಎಸಗಿರುವುದು ಪತ್ತೆಯಾಗಿದೆ.
ಈ ಪ್ರಕರಣವು ಈಗ ಮಹಾರಾಷ್ಟ್ರ ರಾಜಕೀಯದಲ್ಲೂ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಈ ಹಿಂದೆ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಈತನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿವೆ. ಅತಿ ಮುಖ್ಯವಾಗಿ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್ ಅವರು ಈತನ ಕಾಲು ತೊಳೆಯುತ್ತಿರುವ ವಿಡಿಯೋ ವಿರೋಧ ಪಕ್ಷಗಳ ಕೈಗೆ ಅಸ್ತ್ರವಾಗಿದೆ. ಈ ಹಿನ್ನೆಲೆಯಲ್ಲಿ ರೂಪಾಲಿ ಅವರ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಸದ್ಯ ಐಪಿಎಸ್ ಅಧಿಕಾರಿ ತೇಜಸ್ವಿ ಸಾತ್ಪುತೆ ನೇತೃತ್ವದ ವಿಶೇಷ ತನಿಖಾ ತಂಡ (SIT) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಖಾರತ್ ಹೆಸರಿನಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ.

