ಕೊಪ್ಪಳ: ಅತ್ಯಾಚಾರ, ಕೊಲೆಯಂತಹ ಘಟನೆಗಳು ಸಣ್ಣ ಘಟನೆ ಎಂದು ಹೇಳುವ ಮೂಲಕ ಸಂಸದ ರಾಜಶೇಖರ್ ಹಿಟ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಸಂಸದರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದ ಕೊಪ್ಪಳ ಅನ್ವೇಷಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ರಾಜಶೇಖರ್ ಹಿಟ್ನಾಳ್, ಒಂದು ವರ್ಷದ ಹಿಂದೆ ಕೊಪ್ಪಳದ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಅದನ್ನು ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋಯಮಕ್ಕೆ ವ್ಯಾಪಕ ಪೆಟ್ಟುಬಿದ್ದಿದೆ ಎಂದು ಹೇಳಿದ್ದಾರೆ.
ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳ ಸುದ್ದಿಯನ್ನು ವೈಭವೀಕರಿಸಿದ್ದರಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ. ಶೇ.50ಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಸಾಣಾಪುರದಲ್ಲಿ ಇಸ್ರೇಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿತ್ತು. ಇದೇ ವೇಳೆ ಒಡಿಶಾದ ಪ್ರವಾಸಿಗ ಬಿಬಾಶ್ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಮದ್ಯದ ಅಮಲಿನಲ್ಲಿ ಕೃತ್ಯವೆಸಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಇದೇ ಪ್ರಕರಣದ ವಿಚಾರವಾಗಿ ಇದೀಗ ಸಂಸದ ಹಿಟ್ನಾಳ್ ಮಾತನಾಡಿದ್ದಾರೆ.

