ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಬ್ಯಾಂಕ್ ಸಾಲ ಮರುಪಾವತಿಗೆ ವಿನಾಯಿತಿ ಘೋಷಿಸಿದ್ದು, ಬಲವಂತದ ಸಾಲ ವಸೂಲಿ ನಿಷೇಧಿಸಲಾಗಿದೆ.
ರಾಜ್ಯದ ಬರ ಪೀಡಿತ ತಾಲೂಕುಗಳ ರೈತರ ನೆರವಿಗೆ ಧಾವಿಸಿರುವ ಬ್ಯಾಂಕರ್ ಗಳ ರಾಜ್ಯಮಟ್ಟದ ಸಮಿತಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ಸಂಬಂಧಿಸಿದಂತೆ ವಿಶೇಷ ಪರಿಹಾರ ಯೋಜನೆ ಪ್ರಕಟಿಸಿದೆ.
ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶ ನೀಡುವುದರ ಜೊತೆಗೆ ಒಟ್ಟು ಸಾಲ ಮರುಪಾವತಿ ಅವಧಿ ವಿಸ್ತರಿಸಿ ರೈತರಿಗೆ ನೆರವಾಗಲು ನಿರ್ಧರಿಸಿದೆ. ರಾಜ್ಯದ ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಸಾಲಗಳು, ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ಇತರೆ ಕೃಷಿ ಸಂಬಂಧಿತ ಸಾಲಗಳಿಗೆ 12 ತಿಂಗಳ ಮೊರಟೋರಿಯಂ ನೀಡಲು ನಿರ್ಧರಿಸಲಾಗಿದೆ.
ಸಾಧಾರಣ ಬರ ಪೀಡಿತ ತಾಲ್ಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಗೆ ಮತ್ತು ತೀವ್ರ ಬರ ಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ ವಿಸ್ತರಿಸಲಾಗಿದೆ. ಈ ವರ್ಷ ರೈತರಿಂದ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿ ಮಾಡದಂತೆ ಕಟ್ಟುನಿಟ್ಟಿನ ಜೀರೋ ಟಾಲರೆನ್ಸ್ ನೀತಿಯನ್ನು ಜಾರಿಗೆ ತರಲಾಗಿದೆ. (ಚಿತ್ರ ಕೃಪೆ:ಎಐ)
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ
ಮಡಿಕೇರಿ: 2026-27ನೇ ಸಾಲಿಗೆ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್, 03 ಕೊನೆಯ ದಿನವಾಗಿದೆ(ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆ ದಿನಾಂಕ ಇರುವುದಿಲ್ಲ).
ಅರ್ಜಿ ಸಲ್ಲಿಸಲು ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ(ನಿ)ದ ವತಿಯಿಂದ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಪ್ರವರ್ಗ-3ಬಿ ಅಡಿಯಲ್ಲಿ 2(ಎ) ಯಿಂದ 2(ಎಫ್) ವರೆಗೆ ಬರುವ ಸಮುದಾಯಕ್ಕೆ ಸೇರಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-3ಬಿಯಲ್ಲಿ ಪಡೆದಿರಬೇಕು(ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು). ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು. ನಿಗಮದ/ ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ಅರಿವು ಯೋಜನೆಯಡಿ ವಯೋಮತಿ 18 ವರ್ಷಗಳಿಂದ 30 ವರ್ಷಗಳ ಮಿತಿಯಲ್ಲಿರಬೇಕು. ವಾರ್ಷಿಕ ವರಮಾನ ರೂ.3.50 ಲಕ್ಷಗಳು. ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿದಾರರು 21 ವರ್ಷ ಮೇಲ್ಪಟ್ಟು 45 ವರ್ಷದ ಮಿತಿಯಲ್ಲಿರಬೇಕು. ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯನ್ನು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ.98 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ.1.20 ಲಕ್ಷ ಗಳ ಮಿತಿಯೊಳಗಿರಬೇಕು. ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಇರಿಸಿದೆ.
ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದಿರುವ ಫಲಾನುಭವಿಗಳು ಹೊಲಿಗೆ ಯಂತ್ರ ವಿತರಣಾ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ಒಂದು ಬಾರಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಯೋಜನೆಗಳು: ಶ್ರೀ ಶಹಜೀರಾಜೇ ಸಮೃದ್ದಿ ಯೋಜನೆ (ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ), ಜೀಜಾವು ಜಲಭಾಗ್ಯ (ಗಂಗಾ ಕಲ್ಯಾಣ ಯೋಜನೆ) ಈ ಯೋಜನೆಯಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಅರಿವು ಶೈಕ್ಷಣಿಕ ನೇರಸಾಲ ಯೋಜನೆ(ಹೊಸದು), ಅರಿವು ಶೈಕ್ಷಣಿಕ ನೇರಸಾಲ ಯೋಜನೆ(ನವೀಕರಣ), ಮರಾಠ ಮಿಲ್ಟ್ರೀ ಹೋಟೆಲ್, ಸ್ವಾವಲಂಬಿ ಸಾರಥಿ ಯೋಜನೆ, ರಾಜಶ್ರೀ ಶಾಹುಮಹಾರಾಜ ವಿದೇಶಿ ಸಾಲ ಯೋಜನೆ : ಈ ಯೋಜನೆಯಡಿ ವಾರ್ಷಿಕ ವರಮಾನವು ರೂ.15 ಲಕ್ಷಗಳ ಮಿತಿಯಲ್ಲಿರಬೇಕು. ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆ : ಈ ಯೋಜನೆಯಡಿ ಅರ್ಜಿಯನ್ನು www.kaushalkar.com ನಲ್ಲಿ ಸಲ್ಲಿಸಬೇಕು. ಹೊಲಿಗೆ ಯಂತ್ರ ವಿತರಣಾ ಯೋಜನೆ.
ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು, ವಿಳಾಸ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪುಸ್ತಕಗಳಲ್ಲಿ ತಾಳೆಯಾಗಬೇಕು(ಶ್ರೀ/ಶ್ರೀಮತಿ/ಕುಮಾರಿ ಮುಂತಾದ ಮಾಹಿತಿಗಳು). ಬೆಂಗಳೂರು ಒನ್/ಕರ್ನಾಟಕ ಒನ್/ಅಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರೀಕ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‍ನಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‍ಸೈಟ್ https://kmcdc.karnataka.gov.in ರಲ್ಲಿ ಅಥವಾ ನಿಗಮದ ಕೇಂದ್ರ ಕಚೇರಿಯ ದೂ.ಸಂ.8867537799, 080-29903994 ನಿಂದ ಪಡೆಯಬಹುದು. ಜಿಲ್ಲೆಗಳಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಸಂಪರ್ಕಿಸಬಹುದು.
2024-25 ಹಾಗೂ 2025-26ನೇ ಸಾಲಿನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಮತ್ತೊಮ್ಮೆ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್, 03 ಕೊನೆಯ ದಿನವಾಗಿದೆ ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

