ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರು ಮದ್ಯಪಾನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಕುಟುಂಬಸ್ಥರೊಬ್ಬರು, ಭದ್ರತಾ ಸಿಬ್ಬಂದಿಯ ಅಸಹಕಾರದಿಂದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಸುರಕ್ಷತೆ ಮತ್ತು ನೆಮ್ಮದಿಗೆ ಧಕ್ಕೆಯಾಗಿದ್ದನ್ನು ಪ್ರತಿಭಟಿಸಿ, ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕೋರಿದರೂ ಲಿಖಿತ ದೂರು ನೀಡುವಂತೆ ಸೂಚಿಸಿದ ಪೋಲಿಸರ ನಡವಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.
ತಮ್ಮ ಸಣ್ಣ ಮಗಳು ಹಾಗೂ ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು, ಪಕ್ಕದಲ್ಲೇ ಕುಳಿತು ಮದ್ಯ ಸೇವಿಸುತ್ತಿದ್ದ ಯುವಕರ ಗುಂಪನ್ನು ಕಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸಣ್ಣ ಮಕ್ಕಳು ಮತ್ತು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಸರಿಯಲ್ಲ ಎಂದು ಅವರು ಮದ್ಯಪಾಯಿಗಳಿಗೆ ತಿಳಿಹೇಳಿದ್ದಾರೆ. ಮದ್ಯದ ಬಾಟಲಿಗಳು ಸಹ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಹಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ವಿಡಿಯೋ ಮಾಡಿ ತೋರಿಸಿದ್ದಾರೆ.
ಈ ವಿಷಯವನ್ನು ರೈಲಿನಲ್ಲಿದ್ದ ಪೋಲಿಸ್ ಸಿಬ್ಬಂದಿಯ ಗಮನಕ್ಕೆ ತಂದು, ತಕ್ಷಣವೇ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಆ ಜಾಗದಲ್ಲಿದ್ದ ಪೋಲಿಸ್ ಅಧಿಕಾರಿ, ಘಟನೆಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ಮೊದಲು ಲಿಖಿತ ರೂಪದಲ್ಲಿ ದೂರು ಸಲ್ಲಿಸಿ ಎಂದು ಹೇಳಿ ಜಾರಿಕೊಳ್ಳಲು ಯತ್ನಿಸಿದ್ದಾರೆ. ತಮ್ಮ ಮಗಳನ್ನು ತೋರಿಸಿ ಕುಟುಂಬಕ್ಕೆ ಆಗುತ್ತಿರುವ ಮುಜುಗರವನ್ನು ವಿವರಿಸಿದರೂ ಪೋಲಿಸರು ತಕ್ಷಣ ಕ್ರಮ ಕೈಗೊಳ್ಳದಿರುವುದು ವೈರಲ್ ವಿಡಿಯೋದಲ್ಲಿ ಕಂಡುಬಂದಿದೆ.
ರೈಲಿನಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಭದ್ರತಾ ಸಿಬ್ಬಂದಿಯೇ ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಸಾರ್ವಜನಿಕರ ರಕ್ಷಣೆ ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ರೈಲ್ವೆ ಇಲಾಖೆ ಹಾಗೂ ಭದ್ರತಾ ಪಡೆಗಳು ಇಂತಹ ಘಟನೆಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
“>

