ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ವರ್ಸಟೈಲ್ ನಟ ಆರ್. ಮಾಧವನ್ (R Madhavan) ಅವರಿಗೆ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸುವಾಗ ಮಾಧವನ್ ಅವರ ಸಾಂಪ್ರದಾಯಿಕ ಲುಕ್ ಅತ್ಯಂತ ಆಕರ್ಷಕವಾಗಿತ್ತು. ಆದರೆ, ಈ ಸಮಾರಂಭದಲ್ಲಿ ಎಲ್ಲರ ಕಣ್ಣು ಬಿದ್ದಿದ್ದು ಅವರ ಕೈಯಲ್ಲಿದ್ದ ಒಂದು ಅಪರೂಪದ ಗಡಿಯಾರದ ಮೇಲೆ
ಇದು ಸಾಮಾನ್ಯ ವಾಚ್ ಖಂಡಿತ ಅಲ್ಲ. ಮಾಧವನ್ ಅವರು ಧರಿಸಿದ್ದು ಭಾರತದ ಹೆಮ್ಮೆಯ ಟೈಟಾನ್ ಕಂಪನಿಯ ಅತ್ಯಂತ ಪ್ರೀಮಿಯಂ ಲಿಮಿಟೆಡ್ ಎಡಿಷನ್ ಆದ ಟೈಟಾನ್ ನೆಬ್ಯುಲಾ ಜಲ್ಸಾ (Titan Nebula Jalsa) ವಾಚ್. ಇದರ ಬೆಲೆ ಕೇಳಿದರೆ ಯಾರಾದರೂ ಒಂದು ಕ್ಷಣ ಶಾಕ್ ಆಗಲೇಬೇಕು
ಮನೆ ಖರೀದಿಸಬಹುದಾದ ಬೆಲೆಯ ವಾಚ್ ₹40.5 ಲಕ್ಷ
ವರದಿಗಳ ಪ್ರಕಾರ, ನಟ ಮಾಧವನ್ ಧರಿಸಿದ್ದ ಈ ಐಷಾರಾಮಿ ಜಲ್ಸಾ ವಾಚ್‌ನ ಬೆಲೆ ಸುಮಾರು ₹40.5 ಲಕ್ಷ ಈ ಮೊತ್ತದಲ್ಲಿ ಸಣ್ಣ ನಗರಗಳಲ್ಲಿ ಒಂದು ಸುಂದರವಾದ ಮನೆಯನ್ನೇ ಖರೀದಿಸಬಹುದು. ಇದು ಟೈಟಾನ್ ಕಂಪನಿಯ ಇತಿಹಾಸದಲ್ಲೇ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಗಡಿಯಾರ ಎಂದು ಹೇಳಲಾಗಿದೆ.
ವಿಶ್ವಾದ್ಯಂತ ಇರೋದು ಜಸ್ಟ್ 10 ಪೀಸ್ ಮಾತ್ರ ಇಲ್ಲಿದೆ ಇದರ ರಾಯಲ್ ವಿಶೇಷತೆಗಳು:
ಲಿಮಿಟೆಡ್ ಎಡಿಷನ್: ಇಡೀ ಪ್ರಪಂಚದಲ್ಲೇ ಈ ಜಲ್ಸಾ ಮಾಡೆಲ್‌ನ ಕೇವಲ 10 ಯುನಿಟ್‌ಗಳನ್ನು (ಪೀಸ್‌ಗಳನ್ನು) ಮಾತ್ರ ತಯಾರಿಸಲಾಗಿದೆ. ಹಾಗಾಗಿಯೇ ಇದು ಜಗತ್ತಿನ ಅತ್ಯಂತ ಅಪರೂಪದ ಗಡಿಯಾರಗಳ ಪಟ್ಟಿಗೆ ಸೇರಿದೆ.
18-ಕ್ಯಾರೆಟ್ ರೋಸ್ ಗೋಲ್ಡ್: ಈ ಐಷಾರಾಮಿ ವಾಚ್‌ನ ಸಂಪೂರ್ಣ ಕೇಸ್ ಅನ್ನು ಅತ್ಯಂತ ಕಲಾತ್ಮಕವಾಗಿ 18-ಕ್ಯಾರೆಟ್ ರೋಸ್ ಗೋಲ್ಡ್‌ನಿಂದ (Rose Gold) ವಿನ್ಯಾಸಗೊಳಿಸಲಾಗಿದೆ.
ಪದ್ಮಶ್ರೀ ಕಲಾವಿದನ ಹ್ಯಾಂಡ್ ಮೇಡ್ ಕಲೆ: ಈ ಗಡಿಯಾರದ ಡಯಲ್ ಮೇಲೆ ಜೈಪುರದ ಪ್ರಸಿದ್ಧ ಹವಾ ಮಹಲ್ನ 225ನೇ ವಾರ್ಷಿಕೋತ್ಸವದ ಸ್ಮರಣಾರ್ಥ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ಶಕೀರ್ ಅಲಿ ಅವರು ಸಾಂಪ್ರದಾಯಿಕ ಚಿಕಣಿ ಚಿತ್ರಕಲೆ (Miniature Painting) ತಂತ್ರಗಳನ್ನು ಬಳಸಿ ಸ್ವತಃ ಕೈಯಿಂದಲೇ ಚಿತ್ರ ಬಿಡಿಸಿದ್ದಾರೆ.
ರತ್ನಗಳ ವೈಭವ: ಈ ವಾಚ್‌ನ ಸೌಂತರ್ಯ ಹೆಚ್ಚಿಸಲು ಅತ್ಯಂತ ಅಮೂಲ್ಯವಾದ ವಜ್ರಗಳು, ಕೆಂಪು ಅಗೇಟ್ ಸ್ಟೋನ್ಸ್ (Agate Stones) ಮತ್ತು ನೀಲಮಣಿ ಹರಳುಗಳನ್ನು ಬಳಸಲಾಗಿದೆ. ಇದು ಜೈಪುರದ ರಾಜ ಪರಂಪರೆಯನ್ನು ಬಿಂಬಿಸುತ್ತದೆ.
ಫ್ಲೈಯಿಂಗ್ ಟೂರ್ಬಿಲ್ಲನ್ ತಂತ್ರಜ್ಞಾನ: ಗಡಿಯಾರ ತಯಾರಿಕಾ ರಂಗದಲ್ಲೇ ಅತ್ಯಂತ ಸಂಕೀರ್ಣ ಹಾಗೂ ಪ್ರತಿಷ್ಠಿತ ಎನ್ನಲಾಗುವ ‘ಇನ್-ಹೌಸ್ ಫ್ಲೈಯಿಂಗ್ ಟೂರ್ಬಿಲ್ಲನ್’ (Flying Tourbillon) ತಂತ್ರಜ್ಞಾನ ಚಲನೆಯನ್ನು ಈ ವಾಚ್ ಒಳಗೊಂಡಿದೆ.
“ಕನಸ್ಸುಗಳಿಗೂ ಮೀರಿದ ಗೌರವ” – ಭಾವಕರಾದ ಆರ್. ಮಾಧವನ್
ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ಮಾತನಾಡಿದ ನಟ ಮಾಧವನ್, “ನಾನು ಪದ್ಮಶ್ರೀ ಪ್ರಶಸ್ತಿಯನ್ನು ಅತ್ಯಂತ ಕೃತಜ್ಞತೆ ಮತ್ತು ನಮ್ರತೆಯಿಂದ ಸ್ವೀಕರಿಸುತ್ತೇನೆ. ಈ ಜಂಟಿ ಗೌರವವು ನನ್ನ ಕನಸುಗಳಿಗೂ ಮೀರಿದ್ದಾಗಿದೆ. ನನ್ನ ಇಡೀ ಕುಟುಂಬದ ಪರವಾಗಿ ನಾನು ಇದನ್ನು ಸ್ವೀಕರಿಸುತ್ತಿದ್ದೇನೆ. ಅವರ ನಿರಂತರ ಬೆಂಬಲ ಮತ್ತು ನಂಬಿಕೆಯೇ ನನಗೆ ಇಷ್ಟು ದೊಡ್ಡ ಶಕ್ತಿಯನ್ನು ನೀಡಿದೆ” ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

