HomeKarnatakaಇದು ವಿದ್ಯಾರ್ಥಿನಿಲಯಗಳೋ ಅಥವಾ ಕಸದ ತೊಟ್ಟಿಗಳೋ? ಕುಮಾರಕೃಪಾ ಅತಿಥಿಗೃಹದ ನವೀಕರಣಕ್ಕೆ ಕೋಟಿ ಕೋಟಿ ಸುರಿಯಲು ದುಡ್ಡಿದೆ;...

ಇದು ವಿದ್ಯಾರ್ಥಿನಿಲಯಗಳೋ ಅಥವಾ ಕಸದ ತೊಟ್ಟಿಗಳೋ? ಕುಮಾರಕೃಪಾ ಅತಿಥಿಗೃಹದ ನವೀಕರಣಕ್ಕೆ ಕೋಟಿ ಕೋಟಿ ಸುರಿಯಲು ದುಡ್ಡಿದೆ; ಬಡ ಮಕ್ಕಳ ಹಾಸ್ಟೆಲ್ ನಿರ್ವಹಣೆಗೆ ದುಡ್ಡಿಲ್ಲವೇ? ಸಿಎಂಗೆ ಆರ್.ಅಶೋಕ್ ಪ್ರಶ್ನೆ

ಬೆಂಗಳೂರು: ಕುಮಾರಕೃಪಾ ಅತಿಥಿಗೃಹದ ಐಷಾರಾಮಿ ನವೀಕರಣಕ್ಕೆ ಕೋಟಿ ಕೋಟಿ ಸುರಿಯಲು ದುಡ್ಡಿದೆ, ಬಡವರ ಮಕ್ಕಳ ಹಾಸ್ಟೆಲ್ ನಿರ್ವಹಣೆಗೆ ದುಡ್ಡಿಲ್ಲವೇ ಡಿ.ಕೆ.ಶಿವಕುಮಾರ್ ಅವರೇ? ಎಂದು ವಿಪಕ್ಷನಾಯಕ ಆರ್.ಅಶೋಕ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ನಿಮ್ಮ ಐಷಾರಾಮಿ ಸೌಕರ್ಯಕ್ಕೆ ಸರ್ಕಾರದ ಖಜಾನೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಆದರೆ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿ/ಪಂಗಡದ ಬಡ ವಿದ್ಯಾರ್ಥಿಗಳು ಮಾತ್ರ ಕನಿಷ್ಠ ಮೂಲಸೌಕರ್ಯ, ನಿರ್ವಹಣೆ ಇಲ್ಲದ ಹಾಸ್ಟೆಲ್ ಗಳಲ್ಲಿ ನರಕ ಯಾತನೆ ಅನುಭವಿಸಬೇಕಾ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸ್ಟೆಲ್ ಗಳಲ್ಲಿ ಇಷ್ಟೆಲ್ಲಾ ಅವ್ಯವಸ್ಥೆ ತಾಂಡವವಾಡುತ್ತಿದ್ದರೂ ಇದನ್ನೆಲ್ಲಾ ನೋಡಲು ಸಮಾಜ ಕಲ್ಯಾಣ ಇಲಾಖೆಗೆ ಒಬ್ಬ ಪೂರ್ಣಾವಧಿ ಸಚಿವರೂ ಇಲ್ಲ, ವಿದ್ಯಾರ್ಥಿಗಳ ಕಷ್ಟ ಕೇಳಲು ಜಿಲ್ಲಾ ಉಸ್ತವಾರಿ ಸಚಿವರೂ ಇಲ್ಲ! ನಿಮ್ಮ ಅಧಿಕಾರ ಹಂಚಿಕೆ, ಖಾತೆ ಹಂಚಿಕೆ ಕಿತ್ತಾಟದಲ್ಲಿ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಮ್ಮೆ ಬಿಡುವು ಮಾಡಿಕೊಂಡು ಜಿಲ್ಲೆಗಳಿಗೆ ಪ್ರವಾಸ ಮಾಡಿ ಸರ್ಕಾರಿ ಹಾಸ್ಟೆಲ್ ಗಳ ವಾಸ್ತವ ಪರಿಸ್ಥಿತಿ ನೋಡಿ ಸ್ವಾಮಿ, ಅದು ವಿದ್ಯಾರ್ಥಿನಿಲಯಗಳೋ ಅಥವಾ ಕಸದ ತೊಟ್ಟಿಗಳೋ ಎಂದು ನಿಮಗೇ ತಿಳಿಯುತ್ತದೆ.

ಕುಮಾರಕೃಪಾದಲ್ಲಿ ಎಸಿ ರೂಮುಗಳು, ದುಬಾರಿ ಸೋಫಾಗಳು, ಐಷಾರಾಮಿ ಇಂಟೀರಿಯರ್ ಮಾಡಲು ಕೋಟಿ ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಬಡವರ ಮಕ್ಕಳಿಗೆ ಹಾಸ್ಟೆಲ್‌ಗಳಲ್ಲಿ ಮುಗ್ಗುಲು ಹಿಡಿದ ದಿನಸಿ, ಹುಳ ಹಿಡಿದ ಅಕ್ಕಿ-ಬೇಳೆಯ ಅನ್ನ ನೀಡಲಾಗುತ್ತಿದೆ.

ವರ್ಷಗಟ್ಟಲೆ ಸ್ವಚ್ಛಗೊಳಿಸದ ಟ್ಯಾಂಕ್ ನೀರು ಮತ್ತು ಆವರಣದಲ್ಲಿ ನಿಂತಿರುವ ಚರಂಡಿ ನೀರಿನ ಮಧ್ಯೆಯೇ ವಿದ್ಯಾರ್ಥಿಗಳು ಬದುಕುತ್ತಿದ್ದಾರೆ. ಶೌಚಾಲಯಗಳು ಕನಿಷ್ಠ ಬಳಕೆಗೆ ಯೋಗ್ಯವಿಲ್ಲದಷ್ಟು ನಾರುತ್ತಿವೆ.

ಮಹಿಳಾ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳಿಲ್ಲ, ಸೆಕ್ಯೂರಿಟಿ ಗಾರ್ಡ್‌ಗಳಿಲ್ಲ. ಹೆಣ್ಣು ಮಕ್ಕಳು ಪ್ರತಿದಿನ ಭಯದಲ್ಲಿ ಬದುಕುತ್ತಿದ್ದಾರೆ. ಮಂಡ್ಯದಲ್ಲಿ ಇತ್ತೀಚೆಗೆ ಲೋಕಾಯುಕ್ತರು ದಾಳಿ ಮಾಡಿದಾಗ ಬಡ ಹೆಣ್ಣು ಮಕ್ಕಳನ್ನು ಕೋಳಿ ಗೂಡಿನಂತಹ ಬಾಡಿಗೆ ಮನೆಯಲ್ಲಿ ಕುರಿಗಳಂತೆ ತುಂಬಿಟ್ಟಿರುವುದು ಪತ್ತೆಯಾಗಿದೆ. ಇದೇನಾ ನಿಮ್ಮ ಗ್ಯಾರೆಂಟಿ ಸರ್ಕಾರದ ಆಡಳಿತ? ಎಂದು ಕೇಳಿದ್ದಾರೆ.

ಹಾಸ್ಟೆಲ್‌ಗಳಲ್ಲಿ ಸ್ವಚ್ಛತಾ ಸಿಬ್ಬಂದಿ, ಅಡುಗೆ ಸಿಬ್ಬಂದಿ ಇಲ್ಲದ ಕಾರಣ ಓದಬೇಕಾದ ವಿದ್ಯಾರ್ಥಿಗಳೇ ಅಡುಗೆ ಕೆಲಸ ಮಾಡಬೇಕು, ಕಸ ಹೊಡೆಯಬೇಕು, ಶೌಚಾಲಯ ಸ್ವಚ್ಛಗೊಳಿಸಬೇಕು.

ಡಿ.ಕೆ. ಶಿವಕುಮಾರ್ ಅವರೇ, ಉಸ್ತುವಾರಿ ಸಚಿವರೂ ಇಲ್ಲದೆ, ಪೂರ್ಣಾವಧಿ ಸಚಿವರೂ ಇಲ್ಲದೆ ಪ್ರಮುಖ ಇಲಾಖೆಗಳನ್ನು ಗಾಳಿಗೆ ತೂರಿ, ಅಧಿಕಾರದ ಹಪಾಹಪಿಯಲ್ಲಿ ಬಡ ಮಕ್ಕಳ ಹೊಟ್ಟೆಗೆ ಹೊಡೆಯುವುದನ್ನು ನಿಲ್ಲಿಸಿ ಎಂದು ಗುಡುಗಿದ್ದಾರೆ.

ನಿಮ್ಮ ಐಷಾರಾಮಿ ಬದುಕಿನ ಸೌಕರ್ಯಗಳಿಗೆ ಬಳಸುವ ಹಣದಲ್ಲಿ ಕಾಲು ಭಾಗವನ್ನು ಈ ಹಾಸ್ಟೆಲ್‌ಗಳಿಗೆ ನೀಡಿದ್ದರೂ ಬಡವರ ಮಕ್ಕಳು ನಿಟ್ಟುಸಿರು ಬಿಡುತ್ತಿದ್ದರು.

ತಕ್ಷಣವೇ ಯುದ್ಧೋಪಾದಿಯಲ್ಲಿ ರಾಜ್ಯದ ಎಲ್ಲಾ ಹಾಸ್ಟೆಲ್‌ಗಳ ಪರಿಸ್ಥಿತಿ ಸುಧಾರಿಸದಿದ್ದರೆ, ಬಡ ವಿದ್ಯಾರ್ಥಿಗಳ ಪರವಾಗಿ ನಿಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular