ಕಲಬುರಗಿ: ಪಿಎಸ್‌ಐ ಪರೀಕ್ಷಾ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್. ಡಿ ಪಾಟೀಲ್ ಅಲಿಯಾಸ್ ರುದ್ರಗೌಡಗೆ ಕಲಬುರಗಿ ಹೈಕೋರ್ಟ್ ಪೀಠ ಜಾಮೀನು ನೀಡಲು ನಿರಾಕರಿಸಿದೆ.
ಪಿಎಸ್‌ಐ ನೇಮಕಾತಿ ಹಗರಣ ಸೇರಿದಂತೆ ಹಲವು ನೇಮಕಾತಿ ಅಕ್ರಮಗಳ ಆರೋಪಿ ಆರ್. ಡಿ. ಪಾಟೀಲ್ ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಪರೀಕ್ಷಾ ಅಕ್ರಮ ನಡೆಸುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾನೆ ಎಂದು ನ್ಯಾಯಾಲಯ ಕಿಡಿಕಾರಿದೆ.
ಕೋಕಾ ಕಾಯಿದೆಯಡಿ 2023ರಲ್ಲಿ ಬಂಧನಕ್ಕೊಳಗಾಗಿ ಸದ್ಯ ಮೈಸೂರು ಕಾರಾಗೃಹದಲ್ಲಿರುವ ಆರ್.ಡಿ.ಪಾಟೀಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ರಾಜೇಶ್ ಕೆ. ರೈ ಅವರಿದ್ದ ಕಲಬುರಗಿ ಪೀಠ ಜಾಮೀನು ನೀಡಲು ನಿರಾಕರಿಸಿದೆ. ಅರ್ಜಿದಾರರು ಮೇಲ್ನೋಟಕ್ಕೆ ಹಲವು ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ, ಆತನಿಗೆ ಅಕ್ರಮವೆಸಗುವುದೇ ಚಟವಾಗಿದೆ. ಹಾಗಾಗಿ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ನೇಮಕಾತಿ ಪರೀಕ್ಷೆಗಳನ್ನು ತಿರುಚುವ, ಅಕ್ರಮವೆಸಗುವ ಕ್ರಿಮಿನಲ್ ಪಿತೂರಿಗಳಲ್ಲಿ ಪಾಟೀಲ್ ಪಾತ್ರವನ್ನು ತೋರಿಸುವ ಪ್ರಾಥಮಿಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ಸಲ್ಲಿಸಿದೆ. ತನಿಖಾಧಿಕಾರಿಗಳು ಪಾಟೀಲ್ ಖರೀದಿಸಿದ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವಂಚನೆಗೆ ಅವರನ್ನು ಲಿಂಕ್ ಮಾಡುವ ಕರೆ ವಿವರ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳ ಸಂಬಂಧ ಎಂಟು ಪ್ರಕರಣಗಳು ಮತ್ತು 2021ರ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಸೇರಿದಂತೆ ಪರೀಕ್ಷಾ ದುಷ್ಕೃತ್ಯಕ್ಕಾಗಿ ಪಾಟೀಲ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಹಾಗಾಗಿ, ಜಾಮೀನು ನೀಡಲಾಗದು ಎಂದು ಎಂದು ಪೀಠ ಆದೇಶಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನೇಮಕ ಪರೀಕ್ಷೆಗಳಲ್ಲಿ ಅವ್ಯವಹಾರಗಳ ಸಂಬಂಧ ಹಣಕಾಸು ಗುಪ್ತಚರ ಘಟಕದ ಪೊಲೀಸ್ ವರಿಷ್ಠಾಧಿಕಾರಿ ರಾಘವೇಂದ್ರ ಕೆ. ಹೆಗ್ಡೆ ನೇತೃತ್ವದ ಅಪರಾಧ ತನಿಖಾ ವಿಭಾಗದ (ಸಿಐಡಿ)ವಿಶೇಷ ತಂಡ ಆರ್.ಡಿ. ಪಾಟೀಲ್ ನನ್ನು 2023ರ ನವೆಂಬರ್ನಲ್ಲಿ ಬಂಧಿಸಿತ್ತು.
ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ(ಕೋಕಾ) ಅಡಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರ್.ಡಿ.ಪಾಟೀಲ್ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರೋಪಪಟ್ಟಿಯ ಪ್ರಕಾರ, ಕಲಬುರಗಿಯ ಕ್ಲಾಸ್ ಒನ್ ಸಿವಿಲ್ ಗುತ್ತಿಗೆದಾರ ಆರ್.ಡಿ.ಪಾಟೀಲ್, ಅಭ್ಯರ್ಥಿಗಳಿಗೆ ಪರೀಕ್ಷೆಗಳಲ್ಲಿ ನಕಲು ಮಾಡಲು ಸಹಾಯ ಮಾಡಲು ಬ್ಲೂಟೂತ್ ಸಾಧನಗಳು ಮತ್ತು ವಾಕಿ – ಟಾಕಿಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಪೂರೈಸಿದ್ದಾನೆ. ತನಿಖಾಧಿಕಾರಿಗಳು ಆತ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಇದೇ ರೀತಿಯ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

