ಮೈಸೂರು: ಗೋ ರಕ್ಷಕ ಎಂದು ತನ್ನನ್ನು ಘೋಷಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ಗೋವುಗಳನ್ನು ಸಾಗಿಸುವ ವಾಹನಗಳನ್ನು ತಡೆದು ಅವುಗಳ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಅದೇ ವ್ಯಕ್ತಿ ಇದೀಗ ಮೈಸೂರಿನಲ್ಲಿ ಗೋಮಾಂಸ ಮಾರಾಟದ ವಿರುದ್ಧ ದನಿ ಎತ್ತಿದ್ದು, ಶಾಸಕ ತನ್ವೀರ್ ಸೇಠ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಆಗಸ್ಟ್ 25ರಂದು ಮಾಧ್ಯಮಗಳ ಜತೆ ಮಾತನಾಡಿದ್ದ ಪುನೀತ್ ಕೆರೆಹಳ್ಳಿ ಮೈಸೂರಿನ ಕೆಲ ಅಂಗಡಿಗಳಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದ್ದು, ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಅಲ್ಲದೇ ಇದು ಪೊಲೀಸ್ ಇಲಾಖೆ ಮೇಲೆ ಶಾಸಕನ ರಾಜಕೀಯ ಹಸ್ತಕ್ಷೇಪ ಎಂದಿದ್ದ ಪುನೀತ್ ಕೆರೆಹಳ್ಳಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಸಹ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ನೇತೃತ್ವದಲ್ಲಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌ಗೆ ದೂರು ಸಲ್ಲಿಸಲಾಗಿದೆ.
ಗೋಮಾಂಸ ಮಾರಾಟ ವಿಚಾರವನ್ನು ಮುನ್ನೆಲೆಗೆ ತಂದು ಮೈಸೂರಿನಲ್ಲಿ ಹಿಂದೂ – ಮುಸ್ಲಿಂ ಸೌಹಾರ್ದತೆ ಕದಡುವ ಯತ್ನ ಇದಾಗಿದ್ದು, ಮುಸ್ಲಿಂ ಸಮುದಾಯದ ಜನಪ್ರತಿನಿಧಿಯನ್ನು ಗುರಿಯಾಗಿಸಿ ಆರೋಪ ಮಾಡಲಾಗಿದೆ ಎಂದಿದ್ದಾರೆ. ಇನ್ನು ಕಾನೂನು ಉಲ್ಲಂಘನೆಯಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಬೇಕೆ ಹೊರತು ಬಹಿರಂಗವಾಗಿ ಬೆದರಿಕೆ ಹಾಕುವುದು ಸರಿಯಲ್ಲ. ಹೀಗಾಗಿ ಆತನನ್ನು ಬಂಧಿಸಬೇಕು ಎಂದು ದೂರು ಸಲ್ಲಿಸಿದ್ದಾರೆ.

