ಭಾರೀ ನಿರೀಕ್ಷೆಯೊಂದಿಗೆ ಮಹಾರಾಷ್ಟ್ರಕ್ಕೆ ಕಾಲಿಟ್ಟಿದ್ದ ರಾಮೇಶ್ವರಂ ಕೆಫೆಗೆ ಹಿನ್ನಡೆಯಾಗಿದೆ. ಒತ್ತುವರಿ ಆರೋಪದ ಹಿನ್ನಲೆಯಲ್ಲಿ ರಾಮೇಶ್ವರಂ ಕೆಫೆಯ ಕೆಲವು ಭಾಗವನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿದೆ.
ಪುಣೆ ಮಹಾನಗರ ಪಾಲಿಕೆಯು (ಪಿಎಂಸಿ) ವಿಮಾನ್ ನಗರದಲ್ಲಿ ಹೊಸದಾಗಿ ತೆರೆಯಲಾಗಿದ್ದ ರಾಮೇಶ್ವರಂ ಕೆಫೆಯ ಮೇಲೆ ಒತ್ತುವರಿ ಆರೋಪವನ್ನು ಮಾಡಿದೆ. ಅಕ್ರಮವಾಗಿ ಒತ್ತುವರಿ ಮಾಡಿ ನಿರ್ಮಾಣ ಮಾಡಿರುವ ಜಾಗವನ್ನು ಜೆಸಿಬಿ ಮೂಲಕ ತೆರವು ಮಾಡಿದೆ.
ಈ ಕಾರ್ಯಾಚರಣೆಯ ಕುರಿತು ಅಧಿಕಾರಿಗಳು ಮಾತನಾಡಿ, ರಾಮೇಶ್ವರಂ ಕೆಫೆಯ ಕಟ್ಟಡದ ಮುಂಭಾಗದಲ್ಲಿ ಕಡ್ಡಾಯವಾಗಿ ಬಿಡಬೇಕಾದ ಜಾಗದಲ್ಲಿ (mandatory front margin area) ಅನಧಿಕೃತವಾಗಿ ನಿರ್ಮಾಣಗಳನ್ನು ಮಾಡಲಾಗಿತ್ತು. ಅದನ್ನು ತೆರವು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪುಣೆ ನಗರದಲ್ಲಿನ ಅನಧಿಕೃತ ಕಟ್ಟಡಗಳ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿಯೇ ರಾಮೇಶ್ವರಂ ಕೆಫೆಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ರಾಮೇಶ್ವರಂ ಕೆಫೆ ಮಹಾರಾಷ್ಟ್ರಕ್ಕೆ ಪಾದಾರ್ಪಣೆ ಮಾಡಿತ್ತು. ಮುಂಬೈ ಮತ್ತು ಪುಣೆಯಲ್ಲಿ ತನ್ನ ಶಾಖೆಗಳನ್ನು ಪ್ರಾರಂಭಿಸಿತ್ತು. ದೇಶಾದ್ಯಂತ ಜನಪ್ರಿಯವಾಗಿರುವ ರಾಮೇಶ್ವರಂ ಕೆಫೆ ಈಗ ಪುಣೆಯಲ್ಲಿ ಒತ್ತುವರಿ ಕಾರಣಕ್ಕೆ ಸುದ್ದಿ ಮಾಡಿದೆ.

