“ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಪ್ರತಿದಿನದ ಮೆನು ಪ್ರಕಾರ ಗುಣಮಟ್ಟದ ಮತ್ತು ಶುಚಿಯಾದ ಆಹಾರ ವಿತರಿಸುವಂತೆ ಮತ್ತು ಕಳಪೆ ಆಹಾರವನ್ನು ಸರಬರಾಜು ಮಾಡುವ ಗುತ್ತಿಗೆದಾರರನ್ನು ಬದಲಾಯಿಸುವಂತೆ” ಕ್ರಿಮ್ಸ್‌ನ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್. ಕೃಷ್ಣ ಸೂಚನೆ ನೀಡಿದರು.
ಕ್ಸಿಮ್ಸ್‌ಗೆ ಭೇಟಿ ನೀಡಿ ರೋಗಿಗಳಿಗೆ ವಿತರಿಸುವ ಆಹಾರದ ಪರಿಶೀಲನೆ ನಡೆಸಿದರು. ಆಹಾರ ತಯಾರಿಕಾ ಕೊಠಡಿಗೆ ಭೇಟಿ ನೀಡಿದ ಅವರು ರೋಗಿಗಳಿಗೆ ಮೆನು ಪ್ರಕಾರ ಇಂದು ಮೊಟ್ಟೆ ವಿತರಿಸಬೇಕಾಗಿದ್ದು, ಮೊಟ್ಟೆ ವಿತರಿಸದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಅತ್ಯಂತ ಚಿಕ್ಕ ಕೊಠಡಿಯಲ್ಲಿ ಆಹಾರವನ್ನು ಸಿದ್ದಪಡಿಸುತ್ತಿದ್ದು, ಈ ಪ್ರದೇಶದಲ್ಲಿ ಸ್ವಚ್ಚತೆಯ ಕೊರತೆಯೂ ಇರುವುದನ್ನು ಗಮನಿಸಿದ ಅವರು ಆಹಾರ ತಯಾರಿಕಾ ಸ್ಥಳವನ್ನು ಆದಷ್ಟು ಶೀಘ್ರದಲ್ಲಿ ಸ್ಥಳಾಂತರಿಸುವಂತೆ ಮತ್ತು ಆಹಾರ ತಯಾರಿಕಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆಯನ್ನು ಒದಗಿಸುವಂತೆ ಸೂಚಿಸಿದರು.
ಆಸ್ಪತ್ರೆ ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿದ ಅವರು, ಬೆಳಗ್ಗೆ ಮತ್ತು ನಿನ್ನೆ ರಾತ್ರಿ ಊಟ ಮತ್ತು ಉಪಹಾರ ಒದಗಿಸಿರುವ ಕುರಿತು ರೋಗಿಗಳಿಂದಲೇ ಮಾಹಿತಿ ಪಡೆದರು. ಹೊರ ನಡೆಯುವ ಸಂದರ್ಭದಲ್ಲಿ ಮಧ್ಯಾಹ್ನ ಆಹಾರ ವಿತರಣೆಯ ಆಹಾರ ಆಗಮಿಸಿದ್ದನ್ನು ಪರಿಶೀಲಿಸಿ, ಕಳಪೆ ಗುಣಮಟ್ಟದ ಚಪಾತಿ ವಿತರಣೆ ಆಗುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು.
ಈ ಚಪಾತಿಯನ್ನು ಆಸ್ಪತ್ರೆಯ ಆಹಾರ ಕೊಠಡಿಯಲ್ಲಿ ಸಿದ್ದಪಡಿಸದೇ ಹೊರಗಿನಿಂದ ತಂದು ವಿತರಿಸುತ್ತಿದ್ದು, ಈ ಚಪಾತಿ ಆರೋಗ್ಯವಂತರೇ ಸೇವಿಸಲು ಯೋಗ್ಯವಿಲ್ಲ, ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರತಿದಿನ ಇಲ್ಲಿನ ಆಹಾರವನ್ನು ಸೇವಿಸಿದಲ್ಲಿ ಗುಣಮಟ್ಟದಲ್ಲಿ ಸುಧಾರಣೆ ಆಗಲಿದ್ದು, ಆಹಾರದ ಗುಣಮಟ್ಟದ ಕುರಿತಂತೆ ಆಗಾಗ್ಗೆ ಆಹಾರದ ಮಾದರಿಯನ್ನು ತೆಗೆದು ಪರಿಶೀಲನೆ ನಡೆಸಬೇಕು ಎಂದರು.
ಆಸ್ಪತ್ರೆಯ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಪೌಷ್ಠಿಕ ಪುನಃಶ್ಚೇತನ ಕೇಂದ್ರದಲ್ಲಿ ದಾಖಲಾಗುವ ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರದ ಕುರಿತು ಸೂಕ್ತ ವಿವರಣೆ ಮತ್ತು ಕೇಸ್ ಶೀಟ್ ಸಮರ್ಪಕವಾಗಿ ದಾಖಲಿಸಿದ ವೈದ್ಯರಿಗೆ ನೋಟಿಸ್ ನೀಡುವಂತೆ ತಿಳಿಸಿದರು.
ಈ ಕೇಂದ್ರದಲ್ಲಿ ದಾಖಲಾಗುವ ಮಗು ಮತ್ತು ಪೋಷಕರಿಗೆ ಒಟ್ಟು ರೂ.370 ದಿನಗೂಲಿ ನಷ್ಠ ಪರಿಹಾರ ದೊರೆಯಲಿದ್ದು ಮತ್ತು ಈ ಕೇಂದ್ರದಲ್ಲಿ ದೊರೆಯುವ ಇತರೇ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಯೋಜನೆಯ ಪ್ರಯೋಜನ ದೊರಕಿಸಬೇಕು ಎಂದರು.

