ಬೆಂಗಳೂರು: ಪದವಿ ಪೂರ್ವ ಕಾಲೇಜುಗಳಲ್ಲಿ ಮೊಬೈಲ್ ಬಳಕೆಗೆ ಬ್ರೇಕ್ ಹಾಕಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ಪರುಗಣಿಸಿರುವ ಶಿಕ್ಷಣ ಇಲಾಖೆ ಪರೀಕ್ಷೆ ಸಂದರ್ಭಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ವೇಳೆ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ವಿದ್ಯಾರ್ಥಿಗಳಾದಿಯಾಗಿ ಶಿಕ್ಷಕರು, ಪ್ರಾಂಶುಪಾಲರಿಗೂ ಮೊಬೈಲ್ ಬಳಕೆ ನಿರ್ಬಂಧಿಸಲು ತೀರ್ಮಾನಿಸಿದೆ. ಈ ಕ್ರಮವು ಜನವರಿ 27ರಿಂದ ನಡೆಯಲಿರುವ ಎರಡನೇ ಹಂತದ ರಾಜ್ಯ ಮಟ್ಟದ ಪಿಯು ಪರೀಕ್ಷೆಗಳಿಂದಲೇ ಜಾರಿಗೆ ಬರಲಿದೆ.
ಪರೀಕ್ಷಾ ಸಂದರ್ಭಗಳಲ್ಲಿ ಪ್ರಶ್ನೆ ಪತ್ರಿಕೆಗಳು ಮೊಬೈಲ್ ಮೂಲಕವೇ ಸೋರಿಕೆಯಾಗುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಪರೂಕ್ಷೆ ವೇಳೆ ಪರೀಕ್ಷಾ ಕೇಂದ್ರದ ಆವರಣದಲ್ಲಿ ಮೊಬೈಲ್ ಬಳಕೆ ನಿರ್ಬಂಧಿಸಲು ಮುಂದಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲ ಪರೀಕ್ಷಾ ಕರ್ತವ್ಯದಲ್ಲಿರುವ ಶಿಕ್ಷಕರು, ಪ್ರಾಂಶುಪಾಲರು ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೂ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಪರೀಕ್ಷಾ ಕೇಂದ್ರ, ಪರೀಕ್ಷಾ ಕೊಠಡಿಯ ಒಳಗೆ ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ. ಈ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಶಿಕ್ಷಣ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

