ಬೆಂಗಳೂರು: 545 ಪಿಎಸ್ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿ ಜೈಲು ಸೇರಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಅಮಾನತಾಗಿರುವ ಎಡಿಜಿಪಿ ಅಮೃತ್ ಪೌಲ್ ವಿರುದ್ಧ ಇಲಾಖಾ ತನಿಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕೃತ ಕ್ರಮ ಕೈಗೊಂಡಿದೆ.
ಹಗರಣ ನಡೆದ ಅವಧಿಯಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ವಿರುದ್ಧ 2022 ರಲ್ಲೇ ಸಿಐಡಿ ಎಸ್ಐಟಿ ಪೊಲೀಸರು 1,406 ಪುಟಗಳ ದೋಷಾರೋಪ ಪಟ್ಟಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸಲ್ಲಿಸಿದ್ದರು.
ಚಾರ್ಜ್ ಶೀಟ್ ಸಲ್ಲಿಕೆಯಾಗಿ 4 ವರ್ಷ ಕಳೆದಿದ್ದರೂ ಇಲಾಖಾ ವಿಚಾರಣೆ ನಡೆದಿರಲಿಲ್ಲ. ಸದ್ಯ ಜುಲೈ 9 ರಂದು ಇಲಾಖಾ ವಿಚಾರಣೆಯ ಚಾರ್ಜ್ ಶೀಟ್ ಜಾರಿಯಾಗುವ ಮೂಲಕ ತನಿಖೆಗೆ ಅನುಮತಿ ನೀಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಇಲಾಖಾ ತನಿಖೆಗೆ ಅಧಿಕೃತ ಅನುಮೋದನೆ ನೀಡಿದ್ದಾರೆ. ಅಖಿಲ ಭಾರತ ಸೇವೆ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969 ರ ನಿಯಮ 8(4) ರ ಅನ್ವಯ ಈ ಆಂತರಿಕ ತನಿಖೆ ಮುಂದುವರೆಯಲಿದೆ.
ತನಿಖಾ ಸಂಸ್ಥೆ ನೀಡಿದ್ದ ವರದಿ ಹಾಗೂ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ತಮ್ಮ ಮೇಲಿನ ಆರೋಪಗಳಿಗೆ ವಿವರಣೆ ನೀಡುವಂತೆ ಡಿಪಿಎಆರ್ ಇಲಾಖೆಯು ಅಮೃತ್ ಪೌಲ್ಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ.
ಆರಂಭದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಉತ್ತರ ಕರ್ನಾಟಕದ ಎರಡು ಠಾಣೆಗಳಲ್ಲಿ ದಾಖಲಾಗಿದ್ದ ಈ ಪ್ರಕರಣ, ನಂತರ ಸಿಐಡಿ ಎಸ್ಐಟಿಗೆ ವರ್ಗಾವಣೆಯಾಗಿತ್ತು. ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು ಪಿಎಸ್ ಐ ನೇಮಕಾತಿ ಹಗರಣದಲ್ಲಿ ಜೈಲು ಸೇರಿದ ಘಟನೆ ಇದಾಗಿದ್ದು, ಈಗ ಇಲಾಖಾ ವಿಚಾರಣೆ ತೀವ್ರಗೊಂಡಿದೆ.

