ಬೆಂಗಳೂರು: ರಾಜಧಾನಿ ಬೆಂಗಳೂರಿನ ಯಲಹಂಕ ಸಮೀಪದ ದೊಡ್ಡಬೆಟ್ಟಹಳ್ಳಿ ಪ್ರದೇಶದಲ್ಲಿ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿದ್ದು, ಕಳೆದ ಎರಡು-ಮೂರು ದಿನಗಳಿಂದ ನೂರಾರು ಮನೆಗಳಿಗೆ ಮಣ್ಣು ಮಿಶ್ರಿತ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಖಾಸಗಿ ಕಂಪನಿಯೊಂದು ನಡೆಸುತ್ತಿದ್ದ ಪೈಪ್‌ಲೈನ್ ಕಾಮಗಾರಿ ವೇಳೆ ಜಲಮಂಡಳಿಯ ಕಾವೇರಿ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿದೆ. ಇದರ ಪರಿಣಾಮವಾಗಿ ಮಣ್ಣು ಹಾಗೂ ಕಲುಷಿತ ನೀರು ಪೈಪ್‌ಲೈನ್ ಒಳನುಗ್ಗಿ, ಮನೆಗಳ ಸಂಪ್‌ಗಳು ಹಾಗೂ ಓವರ್‌ಹೆಡ್ ವಾಟರ್ ಟ್ಯಾಂಕ್‌ಗಳಿಗೂ ತಲುಪಿದೆ.
ಕಳೆದ ಎರಡು-ಮೂರು ದಿನಗಳಿಂದ ಮನೆಗಳ ಟ್ಯಾಪ್‌ಗಳಲ್ಲಿ ಮಣ್ಣು ಮಿಶ್ರಿತ ಕಪ್ಪು ಬಣ್ಣದ ನೀರು ಬರುತ್ತಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಈಗಾಗಲೇ ನೀರಿನ ಸಮಸ್ಯೆ ಎದುರಿಸುತ್ತಿದ್ದ ನಿವಾಸಿಗಳಿಗೆ ಈ ಘಟನೆ ಮತ್ತಷ್ಟು ಸಂಕಷ್ಟ ಉಂಟುಮಾಡಿದೆ. ಈ ಕಲುಷಿತ ನೀರಿನ ಸಮಸ್ಯೆಯಿಂದ ಸುಮಾರು 500ಕ್ಕೂ ಹೆಚ್ಚು ಮನೆಗಳು ಬಾಧಿತವಾಗಿದ್ದು, ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಗಿದೆ. ಕಲುಷಿತ ನೀರು ಪೂರೈಕೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಲಮಂಡಳಿ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆ ಕೂಡಲೇ ಕ್ರಮ ಕೈಗೊಂಡು ಪೈಪ್‌ಲೈನ್ ದುರಸ್ತಿ ಮಾಡಬೇಕು, ಕಲುಷಿತ ನೀರಿನ ಪೂರೈಕೆಯನ್ನು ತಕ್ಷಣ ನಿಲ್ಲಿಸಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಅಲ್ಲದೆ, ನಿರ್ಲಕ್ಷ್ಯ ವಹಿಸಿದ ಖಾಸಗಿ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

