ಮೈಸೂರು: ಮೈಸೂರು ಆಸ್ತಿ ಹಂಚಿಕೆ ವಿಚಾರವಾಗಿ ಸಹೋದರರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶ್ರೀರಂಗಪಟ್ಟಣದ ರಾಘು(35), ಹರ್ಷವರ್ಧನ್(30) ಕೊಲೆಯಾದವರು ಎಂದು ಹೇಳಲಾಗಿದೆ.
ಅರ್ಜುನಹಳ್ಳಿಯ ರೋಹಿತ್ ಕೊಲೆ ಆರೋಪಿ. ಆಸ್ತಿ ಹಂಚಿಕೆ ವಿಚಾರವಾಗಿ ಹಿರಿಯ ಮತ್ತು ಕಿರಿಯ ಪತ್ನಿಯ ಮಕ್ಕಳ ನಡುವೆ ನಡೆದ ಗಲಾಟೆಯಲ್ಲಿ ರಾಘು ಮತ್ತು ಹರ್ಷವರ್ಧನ್ ಅವರನ್ನು ರೋಹಿತ್ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಅರ್ಜುನಹಳ್ಳಿ ಗ್ರಾಮದ ರಮೇಶ್ ರಾಜು ಶ್ರೀರಂಗಪಟ್ಟಣದ ಶಿಕ್ಷಕಿ ಕಾಮಾಕ್ಷಿ ಜೊತೆಗೆ ಎರಡನೇ ಮದುವೆಯಾಗಿದ್ದರು. ಅವರ ಮಕ್ಕಳಾದ ಹರ್ಷವರ್ಧನ್, ರಾಘು ಶ್ರೀರಂಗಪಟ್ಟಣದಲ್ಲಿ ವಾಸವಾಗಿದ್ದರು. ಮೊದಲ ಪತ್ನಿ ಸುಧಾ ಅವರಿಗೆ ರೋಹಿತ್ ಎಂಬ ಪುತ್ರ ಇದ್ದು ಅರ್ಜುನಹಳ್ಳಿಯಲ್ಲಿ ವಾಸವಾಗಿದ್ದ.
ಆಸ್ತಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಇಬ್ಬರನ್ನು ಕೊಲೆ ಮಾಡಿದ ಬಳಿಕ ಆರೋಪಿ ರೋಹಿತ್ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

