ತುಮಕೂರು: ದೇವಾಲಯಕ್ಕೆ ತೆರಳಿದ್ದ ಪರಿಶಿಷ್ಟ ಜಾತಿಯ ಮಹಿಳೆ, ಅವರ ತಾಯಿ ಮತ್ತು ತಂಗಿಯನ್ನು ದೇವಾಲಯದ ಅರ್ಚಕ ಮತ್ತಿತರರು ದೇವಸ್ಥಾನದಿಂದ ಹೊರ ದಬ್ಬಿದ್ದಾರೆ.
ನೊಂದ ಮಹಿಳೆ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರು ಮಾಗಡಿ ರಸ್ತೆಯ ಅಂದ್ರಳ್ಳಿ ನಿವಾಸಿ ರೋಜಾ ತಮ್ಮ ತವರು ಮನೆ ಇರುವ ಯಡಿಯೂರು ಹೋಬಳಿಯ ತಿಗಳರಪಾಳ್ಯ ಗ್ರಾಮದ ಮಾರಮ್ಮ ದೇವಿ ಹಬ್ಬಕ್ಕೆ ಬಂದಿದ್ದಾರೆ. ಸೋಮವಾರ ರಾತ್ರಿ ಗ್ರಾಮದ ವೆಂಕಟರಮಣ ಮೂಡಲಗಿರಿ ದೇವಾಲಯಕ್ಕೆ ತಮ್ಮ ತಾಯಿ, ತಂಗಿಯನ್ನು ಕರೆದುಕೊಂಡು ಹೋಗಿದ್ದಾರೆ.
ದೇವಾಲಯದ ಒಳಗೆ ಪ್ರವೇಶಿಸಿದಾಗ ಅರ್ಚಕ ಹನುಮಯ್ಯ ಮತ್ತು ಗ್ರಾಮದ ಶ್ರೀನಿವಾಸ್, ಜಯಲಕ್ಷ್ಮಮ್ಮ ಇತರೆ 16 ಜನ ದೇವಾಲಯದಿಂದ ಹೊರ ಹೋಗುವಂತೆ ನಿಂದಿಸಿದ್ದಾರೆ. ನೀನು ಕೀಳು ಜಾತಿಯವಳು, ದೇವಾಲಯದ ಒಳಗೆ ಬರಬಾರದು ಎಂದು ಜಾತಿ ಹೆಸರು ಹೇಳಿ ನಿಂದಿಸಿ ಗಲಾಟೆ ಮಾಡಿ ತಲೆಯ ಕೂದಲು ಹಿಡಿದು ಎಳೆದಾಡಿ ದೇವಸ್ಥಾನದಿಂದ ಹೊರಗೆ ತಳ್ಳಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ದೇವಾಲಯದ ಅರ್ಚಕನ ಬಂಧಿಸಿದ್ದಾರೆ.

