ನವದೆಹಲಿ : ಭಾರತದ 77ನೇ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯ ಕರ್ತವ್ಯ ಪಥದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಧ್ವಜವನ್ನು ಆರೋಹಣ ಮಾಡಿದರು.
ಧ್ವಜಾರೋಹಣದ ನಂತರ ರಾಷ್ಟ್ರಗೀತೆ ಮತ್ತು 21 ಗುಂಡುಗಳ ಹಾರಿಸುವುದರೊಂದಿಗೆ ಗೌರವ ವಂದನೆ ಸಲ್ಲಿಸಲಾಯಿತು. ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರು ಉಪಸ್ಥಿತರಿದ್ದರು.
ಈ ಬಾರಿ ಯುರೋಪಿಯನ್ ಒಕ್ಕೂಟದ ಇಬ್ಬರು ಪ್ರಬಲ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವುದು ವಿಶೇಷವಾಗಿದೆ. ರಾಷ್ಟ್ರಪತಿಗಳು ಮತ್ತು ಅತಿಥಿಗಳು ರಾಷ್ಟ್ರಪತಿ ಭವನದಿಂದ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಕರ್ತವ್ಯ ಪಥಕ್ಕೆ ಆಗಮಿಸುವುದು ಗಣರಾಜ್ಯೋತ್ಸವದ ಒಂದು ಮುಖ್ಯ ಆಕರ್ಷಣೆ. ಈ ಸಂದರ್ಭದಲ್ಲಿ ದ್ರೌಪದಿ ಮುರ್ಮು ಗಗನಯಾತ್ರಿ ಶುಭಾಂಶು ಶುಕ್ಲಾಗೆ ‘ಅಶೋಕ ಚಕ್ರ’ ಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿದ ನಂತರ, 21 ಫಿರಂಗಿಗಳ ಗೌರವ ವಂದನೆಯೊಂದಿಗೆ ರಾಷ್ಟ್ರಗೀತೆಯನ್ನು ಹಾಡಲಾಯಿತು.
ಪಥಸಂಚಲನ : ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಅದ್ಭುತ ಪಥಸಂಚಲನ ಮತ್ತು ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.

