ವಿಶ್ವದ ಅತ್ಯಂತ ಅಮೂಲ್ಯವಾದ ವಜ್ರ ಎಂದರೆ ಕೂಡಲೇ ನೆನಪಿಗೆ ಬರುವುದು ‘ಕೋಹಿನೂರ್’. ಆದರೆ, ಗಾತ್ರ ಮತ್ತು ತೂಕದಲ್ಲಿ ಕೋಹಿನೂರ್ ವಜ್ರವನ್ನೇ ಮೀರಿಸುವ ವಿಶ್ವದ ಬೃಹತ್ ವಜ್ರ ಮತ್ತೊಂದಿದೆ. 1905ರ ಜನವರಿ 25 ರಂದು ದಕ್ಷಿಣ ಆಫ್ರಿಕಾದ ಗಣಿಯೊಂದರಲ್ಲಿ ಪತ್ತೆಯಾದ ಈ ವಜ್ರದ ರೋಚಕ ಇತಿಹಾಸ ಇಲ್ಲಿದೆ.
ಕಲಿನನ್ ವಜ್ರದ ಉದಯ: ದಕ್ಷಿಣ ಆಫ್ರಿಕಾದ ಕಲಿನನ್ ಎಂಬಲ್ಲಿರುವ ಪ್ರೀಮಿಯರ್ ಡೈಮಂಡ್ ಮೈನಿಂಗ್ ಕಂಪನಿಯ ಮೇಲ್ವಿಚಾರಕ ಫ್ರೆಡ್ರಿಕ್ ವೆಲ್ಸ್ ಎಂಬುವವರು ಗಣಿಯ ಪರಿಶೀಲನೆ ನಡೆಸುತ್ತಿದ್ದಾಗ, ನೆಲದ ಅಡಿಯಲ್ಲಿ ಮಿಂಚುತ್ತಿದ್ದ ಬೃಹತ್ ವಜ್ರವನ್ನು ಪತ್ತೆಹಚ್ಚಿದರು. 3,106 ಕ್ಯಾರೆಟ್ (ಸುಮಾರು 621 ಗ್ರಾಂ) ತೂಕದ ಈ ಅಚ್ಚ ಬಿಳಿ ಬಣ್ಣದ ವಜ್ರಕ್ಕೆ ಗಣಿಯ ಮಾಲೀಕ ಸರ್ ಥಾಮಸ್ ಕಲಿನನ್ ಅವರ ನೆನಪಿಗಾಗಿ ‘ಕಲಿನನ್ ವಜ್ರ’ (Cullinan Diamond) ಎಂದು ಹೆಸರಿಡಲಾಯಿತು.
ಕಿಂಗ್ ಎಡ್ವರ್ಡ್‌ಗೆ ಜನ್ಮದಿನದ ಉಡುಗೊರೆ: ಈ ವಜ್ರವನ್ನು ಆಗಿನ ಟ್ರಾನ್ಸ್‌ವಾಲ್ ಪ್ರಾಂತ್ಯದ ಸರ್ಕಾರವು ಖರೀದಿಸಿ, ಬ್ರಿಟನ್ ರಾಜ ಎಡ್ವರ್ಡ್ VII ಅವರಿಗೆ ಜನ್ಮದಿನದ ಕಾಣಿಕೆಯಾಗಿ ನೀಡಿತು. ಈ ವಜ್ರವನ್ನು ಲಂಡನ್‌ಗೆ ಸಾಗಿಸಿದ ಕಥೆ ಸಿನಿಮಾ ಮಾದರಿಯಲ್ಲಿದೆ. ಕಳ್ಳರ ಭಯದಿಂದ ಹಡಗಿನಲ್ಲಿ ಬಾರೀ ಭದ್ರತೆಯೊಂದಿಗೆ ನಕಲಿ ವಜ್ರವನ್ನು ಕಳುಹಿಸಲಾಗಿತ್ತು. ಆದರೆ, ಅಸಲಿ ಕಲಿನನ್ ವಜ್ರವನ್ನು ಒಂದು ಸಾಮಾನ್ಯ ಪೆಟ್ಟಿಗೆಯಲ್ಲಿ ಹಾಕಿ ಯಾವುದೇ ಭದ್ರತೆ ಇಲ್ಲದೆ ರಹಸ್ಯವಾಗಿ ಲಂಡನ್‌ಗೆ ತಲುಪಿಸಲಾಯಿತು.
9 ಬೃಹತ್ ರತ್ನಗಳಾಗಿ ತುಂಡಾದ ವಜ್ರ: ಬೃಹತ್ ಗಾತ್ರದ ಈ ಕಚ್ಚಾ ವಜ್ರವನ್ನು ಕತ್ತರಿಸುವ ಜವಾಬ್ದಾರಿಯನ್ನು ಆಮ್‌ಸ್ಟರ್‌ಡ್ಯಾಮ್‌ನ ಜೋಸೆಫ್ ಆಶರ್ ಅವರಿಗೆ ನೀಡಲಾಯಿತು. ಆರು ತಿಂಗಳುಗಳ ಕಾಲ ವಜ್ರವನ್ನು ಅಧ್ಯಯನ ಮಾಡಿದ ಆಶರ್, ಮೊದಲ ಬಾರಿಗೆ ಕತ್ತರಿಸಲು ಪ್ರಯತ್ನಿಸಿದಾಗ ಬ್ಲೇಡ್ ಮುರಿದುಹೋಗಿತ್ತು. ಎರಡನೇ ಪ್ರಯತ್ನದಲ್ಲಿ ವಜ್ರವು ನಿಖರವಾಗಿ ಕತ್ತರಿಸಲ್ಪಟ್ಟಾಗ ಆಶರ್ ಆನಂದದಿಂದ ಮೂರ್ಛೆ ಹೋದರಂತೆ! ಅಂತಿಮವಾಗಿ ಇದನ್ನು 9 ದೊಡ್ಡ ರತ್ನಗಳಾಗಿ ಮತ್ತು ಸುಮಾರು 100 ಸಣ್ಣ ಹರಳುಗಳಾಗಿ ವಿಂಗಡಿಸಲಾಯಿತು.
ಈಗ ಎಲ್ಲಿದೆ ಈ ವಜ್ರ? ಕಲಿನನ್ ವಜ್ರದ ಅತ್ಯಂತ ದೊಡ್ಡ ಭಾಗವನ್ನು ‘ಗ್ರೇಟ್ ಸ್ಟಾರ್ ಆಫ್ ಆಫ್ರಿಕಾ’ (Cullinan I) ಎಂದು ಕರೆಯಲಾಗುತ್ತದೆ. ಇದು ಬ್ರಿಟಿಷ್ ರಾಜದಂಡದಲ್ಲಿದೆ (Sceptre). ಎರಡನೇ ಅತಿದೊಡ್ಡ ಭಾಗವಾದ ‘Cullinan II’ ಬ್ರಿಟಿಷ್ ರಾಜಮಕುಟದ (Imperial State Crown) ಅಂದವನ್ನು ಹೆಚ್ಚಿಸುತ್ತಿದೆ. ಉಳಿದ ಭಾಗಗಳನ್ನು ಲಂಡನ್ ಟವರ್‌ನಲ್ಲಿ ಬ್ರಿಟಿಷ್ ರಾಜಮನೆತನದ ಆಭರಣಗಳ ಸಂಗ್ರಹದಲ್ಲಿ ಇರಿಸಲಾಗಿದೆ.
ಬೆಲೆ ಎಷ್ಟು ಗೊತ್ತೇ? ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ ಈ ಕಲಿನನ್ ವಜ್ರದ ಬೆಲೆ ಸುಮಾರು 2 ಶತಕೋಟಿ ಡಾಲರ್ ಅಂದರೆ ಅಂದಾಜು 16,000 ಕೋಟಿ ರೂಪಾಯಿಗಳಿಗೂ ಅಧಿಕ!

