ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಚರ್ಚೆಯನ್ನು ಬದಿಗೊತ್ತಿದ್ದಾರೆ. 2026-27ನೇ ಸಾಲಿನ ಬಜೆಟ್ ಮಂಡನೆ ತಯಾರಿಯನ್ನು ಆರಂಭಿಸಿದ್ದಾರೆ. ಈಗಾಗಲೇ 17 ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಅವರು 18ನೇ ಬಜೆಟ್ ಅನ್ನು ಮಾರ್ಚ್ ತಿಂಗಳಿನಲ್ಲಿ ಮಂಡನೆ ಮಾಡಲಿದ್ದಾರೆ.
ದೇವರಾಜ ಅರಸು ಅವರ 7 ವರ್ಷ 239 ದಿನಗಳ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿದ್ದ ದಾಖಲೆಯನ್ನು ಮುರಿದು ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿರುವ ಸಿದ್ದರಾಮಯ್ಯ ಈಗ ಬಜೆಟ್ ಮಂಡನೆಯಲ್ಲೂ ದಾಖಲೆ ಬರೆಯುತ್ತಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 20ರ ಮಂಗಳವಾರದಿಂದ ಬಜೆಟ್ ಪೂರ್ವ ಸಭೆಯನ್ನು ನಡೆಸಲಿದ್ದಾರೆ. ಮಾರ್ಚ್ನಲ್ಲಿ 2026-27ನೇ ಸಾಲಿನ ಬಜೆಟ್ ಅನ್ನು ಅವರು ಮಂಡಿಸುವ ನಿರೀಕ್ಷೆ ಇದೆ, ಬಜೆಟ್ ಅಧಿವೇಶನದ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ದೆಹಲಿಯಿಂದ ಸ್ಪಷ್ಟ ಸಂದೇಶ: ನಾಯಕತ್ವ ಬದಲಾವಣೆ ವಿಚಾರ 2005ರ ನವೆಂಬರ್ನಿಂದ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಹೈಕಮಾಂಡ್ ನಾಯಕರು ಹೇಳಿದಂತೆ ಕೇಳುವೆ ಎಂದು ಸಿದ್ದರಾಮಯ್ಯ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.
ಈಗ ದೆಹಲಿಯಿಂದ ತಮ್ಮ ಆಪ್ತ ಸಚಿವರ ಮೂಲಕ ಸ್ಪಷ್ಟ ಸಂದೇಶವನ್ನು ಪಡೆದಿರುವ ಸಿದ್ದರಾಮಯ್ಯ ಬಜೆಟ್ ಮಂಡನೆ ತಯಾರಿ ಆರಂಭಿಸಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ ಭೇಟಿಯಾಗಿದ್ದರು.
ಈ ಭೇಟಿ ಬಳಿಕ ಮಾತನಾಡಿದ್ದ ಅವರು, “ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಶಾಸಕರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ. ಈ ವಿಚಾರದಲ್ಲಿ ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಬೇಕು” ಎಂದು ಹೇಳಿದ್ದರು.
“ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ನಮ್ಮ ಪಕ್ಷದ ಶಾಸಕರಿಗಿಂತ ಮಾಧ್ಯಮಗಳು ಹೆಚ್ಚು ಆಸಕ್ತಿ ತೋರುತ್ತಿವೆ” ಎಂದು ತಿಳಿಸಿದ್ದರು.
ಸದ್ಯಕ್ಕೆ ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಫುಲ್ ಸ್ಟಾಪ್ ಇಟ್ಟಿದ್ದು, ಸಿದ್ದರಾಮಯ್ಯ ಬಜೆಟ್ ಮಂಡನೆ ತಯಾರಿ ಆರಂಭಿಸಿದ್ದಾರೆ. ಮಂಗಳವಾರ ಬಜೆಟ್ಗಾಗಿ ಗೃಹ ಕಚೇರಿಯಲ್ಲಿ ಅವರು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ.
ಅಧಿಕಾರಿಗಳ ಜೊತೆ ರಾಜ್ಯದ ಆರ್ಥಿಕ ಪರಿಸ್ಥಿತಿ, ಜಿಎಸ್ಟಿ ಪಾಲು, ವಿವಿಧ ಇಲಾಖೆಗಳ ಪ್ರಮುಖ ಬೇಡಿಕೆಗಳು, ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಯನ್ನು ನಡೆಸಲಿದ್ದಾರೆ.
ಸಂಪನ್ಮೂಲ ಕ್ರೋಢಿಕರಣದ ಕುರಿತು ಅವರು ಅಧಿಕಾರಿಗಳ ಜೊತೆ ಸುಧೀರ್ಘ ಚರ್ಚೆ ಮಾಡಲಿದ್ದಾರೆ. ಬಳಿಕ 2026-27ನೇ ಸಾಲಿನ ಬಜೆಟ್ ಮಂಡನೆಯ ಪೂರ್ವ ತಯಾರಿಯ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಿದ್ದಾರೆ.
2025-26ನೇ ಸಾಲಿನ ಬಜೆಟ್ ಗಾತ್ರ ಗ್ಯಾರಂಟಿ ಯೋಜನೆಗಳ ಕಾರಣಕ್ಕೆ 4 ಲಕ್ಷ ಕೋಟಿ ದಾಟಿತ್ತು. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿತ್ತು.
ಈ ಬಾರಿಯ ಬಜೆಟ್ ಗಾತ್ರ ಇದನ್ನು ಮೀರುವ ನಿರೀಕ್ಷೆ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುವ ಕಾರಣಕ್ಕೆ ಬಜೆಟ್ನಲ್ಲಿ ಒಂದಷ್ಟು ಜನಪ್ರಿಯ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಬೇಕಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಗಳು ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದ್ದು, ಬೆಂಗಳೂರು ನಗರದ 5 ನಗರ ಪಾಲಿಕೆ ಅಧಿಕಾರವನ್ನು ಹಿಡಿಯಲು ಬೆಂಗಳೂರು ನಗರಕ್ಕೂ ವಿಶೇಷ ಕೊಡುಗೆಗಳನ್ನು ಬಜೆಟ್ನಲ್ಲಿ ಘೋಷಿಸುವ ನಿರೀಕ್ಷೆ ಇದೆ.

