HomeKarnatakaಬರ ಪರಿಸ್ಥಿತಿ ಕುರಿತು ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ

ಬರ ಪರಿಸ್ಥಿತಿ ಕುರಿತು ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ

ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಮಗ್ರವಾಗಿ ಮನವರಿಕೆ ಮಾಡಿಕೊಡಲು ಸರ್ವಪಕ್ಷ ನಿಯೋಗದ ಮೂಲಕ ಸಮಯ ಕೇಳಲಾಗಿದೆ. ಆದರೆ, ಪ್ರಧಾನಮಂತ್ರಿಗಳಿಂದ ಇನ್ನೂ ಭೇಟಿಗೆ ಸಮಯ ನಿಗದಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿಯ ಕುರಿತು ದೆಹಲಿಗೆ ತೆರಳಿ ಪ್ರಧಾನಿಯವರಿಗೆ ಸಂಪೂರ್ಣ ಮಾಹಿತಿ ನೀಡಬೇಕಾಗಿದೆ. ಪ್ರಧಾನಿ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸುವ ಅವಕಾಶವಿದ್ದರೂ, ಬರದ ತೀವ್ರತೆ, ರೈತರ ಸಮಸ್ಯೆಗಳು ಹಾಗೂ ರಾಜ್ಯದ ಅಗತ್ಯತೆಗಳ ಕುರಿತು ದೆಹಲಿಯಲ್ಲೇ ನಿಯೋಗದ ಮೂಲಕ ವಿವರವಾಗಿ ಚರ್ಚಿಸುವ ಅಗತ್ಯವಿದೆ ಎಂದರು.

ಇಂಧನ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆಗೆ ತಿರುಗೇಟು

ಇಂಧನ ದರ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿ ನಾಯಕರ ಹೇಳಿಕೆಗಳನ್ನು ತಾನೂ ಗಮನಿಸಿದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೆಟ್ರೋಲ್ ಮತ್ತು ಡೀಸೆಲ್ ದರಗಳು ಎಷ್ಟು ಏರಿಕೆಯಾಗಿವೆ ಎಂಬುದನ್ನು ಬಿಜೆಪಿ ನಾಯಕರು ಹೇಳಬೇಕು. ಇಂಧನ ದರ ಏರಿಕೆಯ ಪರಿಣಾಮ ಸಾರಿಗೆ ಕ್ಷೇತ್ರದ ಮೇಲೆ ಬೀಳುತ್ತದೆ. ಅದರ ಪರಿಣಾಮ ಕೃಷಿಕರ ಮೇಲೂ ಆಗುತ್ತದೆ. ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವ ವಿಚಾರಗಳು. ಆದರೆ, ಬಿಜೆಪಿ ನಾಯಕರು ಈ ಅಂಶಗಳನ್ನು ಹೇಳುವುದಿಲ್ಲ ಎಂದು ಅವರು ಟೀಕಿಸಿದರು.

ಎಸ್‌ಐಆರ್ ಬಗ್ಗೆ ಕಾಂಗ್ರೆಸ್ ನಿಲುವು ಬದಲಾಗಿಲ್ಲ

ರಾಜ್ಯದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಕೆಲವು ಸಚಿವರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕೆಲವು ಕ್ಷೇತ್ರಗಳಲ್ಲಿ ಎಸ್‌ಐಆರ್‌ನಿಂದ ದೊಡ್ಡ ಪ್ರಮಾಣದ ಪರಿಣಾಮವಾಗಿಲ್ಲ ಎಂದು ಸಚಿವರು ತಮ್ಮ ಕ್ಷೇತ್ರಗಳ ಅನುಭವದ ಆಧಾರದ ಮೇಲೆ ಹೇಳಿರಬಹುದು ಎಂದರು.

ಕೆಲವು ಕಡೆ ಎರಡು ಸಾವಿರದಷ್ಟು ಹೆಸರುಗಳು ಸೇರ್ಪಡೆಯಾಗಿರಬಹುದು ಅಥವಾ ತೆಗೆದುಹಾಕಲಾಗಿರಬಹುದು. ಆದರೆ, ಇದರಿಂದ ಒಟ್ಟಾರೆ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದರು.

ವಿಸ್ತೃತವಾಗಿ ನೋಡಿದರೆ ಸುಮಾರು 1.08 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಲ್ಲಿ ಸುಮಾರು 16 ಲಕ್ಷ ಮಂದಿಯನ್ನು ಮೃತರು ಎಂದು ಗುರುತಿಸಲಾಗಿದೆ. ಆದರೆ, ಅವರಲ್ಲಿ ಕೆಲವರು ಬದುಕಿರುವವರೂ ಇದ್ದಾರೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ. ಸುಮಾರು 66 ಲಕ್ಷ ಮಂದಿಯನ್ನು ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಗೊಂಡಿದ್ದರೆ, ಮೈಸೂರಿನ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಬೇಕಲ್ಲವೇ? ಅಲ್ಲಿಯೂ ಹೆಸರು ಇಲ್ಲದಿದ್ದರೆ ಅವರು ಎಲ್ಲಿಗೆ ಹೋದರು ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.

ಈ ಕಾರಣಗಳಿಂದಲೇ ಎಸ್‌ಐಆರ್ ಸರಿಯಾಗಿ ನಡೆದಿಲ್ಲ ಎಂದು ಕಾಂಗ್ರೆಸ್ ವಿರೋಧಿಸುತ್ತಿದೆ. ಎಸ್‌ಐಆರ್‌ನ್ನು ತಿರಸ್ಕರಿಸಬೇಕು ಎಂಬುದು ಪಕ್ಷದ ನಿಲುವಾಗಿದೆ. ಎಐಸಿಸಿ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಅದಕ್ಕೆ ವಿರುದ್ಧವಾಗಿ ಬೇರೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಯಾವ ಮತದಾರರ ಪಟ್ಟಿಯನ್ನು ಬಳಸಬೇಕು ಎಂಬುದನ್ನು ಚುನಾವಣಾ ಆಯೋಗವೇ ನಿರ್ಧರಿಸಬೇಕು. ಸದ್ಯ ಇರುವ ಪಟ್ಟಿ ಇನ್ನೂ ಕರಡು ಹಂತದಲ್ಲಿದ್ದು, ಅಂತಿಮ ಪಟ್ಟಿ ಪ್ರಕಟವಾಗಿಲ್ಲ ಎಂದು ಅವರು ಹೇಳಿದರು.

24 ಲಕ್ಷ ಅನರ್ಹ ಪಿಂಚಣಿದಾರರ ಹೆಸರು ತೆರವು

ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳ ಸ್ಥಗಿತದ ಕುರಿತು ಸ್ಪಷ್ಟನೆ ನೀಡಿದ ಪರಮೇಶ್ವರ್, ಈ ವಿಚಾರವಾಗಿ ಈಗಾಗಲೇ ಎರಡು-ಮೂರು ಸಭೆಗಳನ್ನು ನಡೆಸಲಾಗಿದೆ ಎಂದರು.

ಸರ್ಕಾರ ಈಗಾಗಲೇ ಪಿಂಚಣಿ ಪಡೆಯಲು ಇರುವ ಆದಾಯ ಮಿತಿಯನ್ನು ₹1.30 ಲಕ್ಷಕ್ಕೆ ಹೆಚ್ಚಿಸಿದೆ. ಆದರೂ ಕಡಿಮೆ ವಯಸ್ಸಿನವರೂ ವೃದ್ಧಾಪ್ಯ ಪಿಂಚಣಿ ಪಡೆಯುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ಇಂತಹ ಸುಮಾರು 24 ಲಕ್ಷ ಅನರ್ಹ ಫಲಾನುಭವಿಗಳ ಹೆಸರುಗಳನ್ನು ಪರಿಶೀಲಿಸಿ ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಈ ಪ್ರಕ್ರಿಯೆ ಇನ್ನೂ 15 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಪಿಂಚಣಿ ವ್ಯವಸ್ಥೆಯಲ್ಲಿ ಉಂಟಾಗಿರುವ ಗೊಂದಲಗಳು ಸರಿಯಾಗಲಿವೆ ಎಂದು ಡಾ. ಜಿ. ಪರಮೇಶ್ವರ್ ಭರವಸೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular