ಪ್ರಯಾಣಿಕರೊಬ್ಬರು ಬೆಳಗಿನ ಜಾವ 5.45ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇನ್ನೂ ಒಂದು ಗಂಟೆ ಕಳೆದರೆ ಬೆಂಗಳೂರಿಗೆ ಹೊರಡಬೇಕಿದ್ದ ವಿಮಾನದಲ್ಲಿ ಕುಳಿತುಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು. ಆದರೆ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ, ಚೆಕ್ಇನ್ ಕೌಂಟರ್ನಲ್ಲಿನ ವಿಳಂಬದಿಂದಾಗಿ ಅವರ ಪ್ರಯಾಣದ ಯೋಜನೆಯೇ ತಲೆಕೆಳಗಾಯಿತು. ತುರ್ತು ಸಭೆಗೆ ಹೋಗಬೇಕಿದ್ದ ವ್ಯಕ್ತಿ ಕೊನೆಗೆ ಅನಿವಾರ್ಯವಾಗಿ ಮತ್ತೊಂದು ವಿಮಾನದ ಟಿಕೆಟ್ ಖರೀದಿಸಬೇಕಾಯಿತು. ಇದರಿಂದ ಹೆಚ್ಚುವರಿ ಹಣದ ನಷ್ಟವೂ ಆಯಿತು.
ಆದರೆ ತಮ್ಮ ತಪ್ಪಿಲ್ಲದಿದ್ದರೂ ವಿಮಾನ ತಪ್ಪಿಸಿಕೊಂಡಿದ್ದಕ್ಕೆ ಅವರು ಸುಮ್ಮನೆ ಕೂರಲಿಲ್ಲ. ವಿಮಾನಯಾನ ಸಂಸ್ಥೆಯ ವಿರುದ್ಧ ಗ್ರಾಹಕ ಆಯೋಗದ ಮೆಟ್ಟಿಲೇರಿದರು. ಸುದೀರ್ಘ ಹೋರಾಟದ ಬಳಿಕ ಇದೀಗ ಅವರಿಗೆ ಬರೋಬ್ಬರಿ ₹71,587 ಪರಿಹಾರ ಸಿಕ್ಕಿದೆ. ಪ್ರಯಾಣಿಕನಿಗೆ ನ್ಯಾಯ ಒದಗಿಸಿರುವ ಗ್ರಾಹಕ ಆಯೋಗ ವಿಮಾನಯಾನ ಸಂಸ್ಥೆಗೆ ಹಣ ಪಾವತಿಸುವಂತೆ ಆದೇಶಿಸಿದೆ.
ಬೆಂಗಳೂರಿಗೆ ಹೊರಟಿದ್ದ ಪ್ರಯಾಣಿಕನಿಗೆ ಎದುರಾದ ಸಂಕಷ್ಟ!
ದೆಹಲಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು 2025ರ ಜೂನ್ನಲ್ಲಿ ತುರ್ತು ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಬೇಕಿತ್ತು. ಇದಕ್ಕಾಗಿ ದೆಹಲಿಯಿಂದ ಬೆಂಗಳೂರಿಗೆ ಹೋಗಿ ಬರುವ ವಿಮಾನ ಟಿಕೆಟ್ಗಳನ್ನು ಮುಂಚಿತವಾಗಿಯೇ ಬುಕ್ ಮಾಡಿಕೊಂಡಿದ್ದರು.
ಅವರು ಪ್ರಯಾಣಿಸಬೇಕಿದ್ದ ವಿಮಾನ ಬೆಳಿಗ್ಗೆ 6.45ಕ್ಕೆ ಹೊರಡಬೇಕಿತ್ತು. ವಿಮಾನ ತಪ್ಪಬಾರದು ಎಂಬ ಮುನ್ನೆಚ್ಚರಿಕೆಯಿಂದ ಬೆಳಿಗ್ಗೆ 5.45ರ ವೇಳೆಗೆ, ಅಂದರೆ ವಿಮಾನ ಹೊರಡುವ ಒಂದು ಗಂಟೆ ಮೊದಲೇ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದರು.
ಆದರೆ ಸಮಯಕ್ಕೆ ಸರಿಯಾಗಿ ಬಂದರೂ ಅವರಿಗೆ ವಿಮಾನ ಹತ್ತುವ ಅವಕಾಶ ಸಿಗಲಿಲ್ಲ. ಚೆಕ್ಇನ್ ಪ್ರಕ್ರಿಯೆಯಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಸಹಕರಿಸದೆ, ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಹಲವು ಬಾರಿ ಸಹಾಯ ಕೇಳಿದರೂ ಸ್ಪಂದಿಸದೆ ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಒಂದು ಕೌಂಟರ್ನಿಂದ ಮತ್ತೊಂದು ಕೌಂಟರ್ಗೆ ಅಲೆದಾಟ!
ಈ ನಡುವೆ ಗ್ರೌಂಡ್ ಸ್ಟಾಫ್ ಸಿಬ್ಬಂದಿಯೊಬ್ಬರು ವಿಮಾನದಲ್ಲಿ ಸೀಟುಗಳು ಖಾಲಿ ಇಲ್ಲ ಎಂದು ಹೇಳಿ, ಟಿಕೆಟ್ ಮರುನಿಗದಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಮತ್ತೊಂದು ಹೆಲ್ಪ್ ಡೆಸ್ಕ್ಗೆ ತೆರಳುವಂತೆ ಸೂಚಿಸಿದ್ದಾರೆ.
ಅದರಂತೆ ಪ್ರಯಾಣಿಕರು ಮತ್ತೊಂದು ಕೌಂಟರ್ಗೆ ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿಂದ ಇಲ್ಲಿಗೆ ಅಲೆದಾಡುವಷ್ಟರಲ್ಲಿ ಅಮೂಲ್ಯ ಸಮಯ ಕಳೆದುಹೋಗಿತ್ತು. ಕೊನೆಗೆ ವಿಮಾನವೇ ಹೊರಟುಹೋಗಿತ್ತು.
ತುರ್ತು ಸಭೆಗೆ ಹಾಜರಾಗಲೇಬೇಕಿದ್ದ ಕಾರಣ ಬೇರೆ ದಾರಿಯಿಲ್ಲದೆ ಅದೇ ವಿಮಾನಯಾನ ಸಂಸ್ಥೆಯಲ್ಲಿ ಮತ್ತೊಂದು ವಿಮಾನದ ಟಿಕೆಟ್ ಖರೀದಿಸಿದ್ದಾರೆ. ಇದಕ್ಕಾಗಿ ಹೆಚ್ಚುವರಿಯಾಗಿ ₹11,587 ಪಾವತಿಸಬೇಕಾಯಿತು.
ವಾಪಸ್ ಪ್ರಯಾಣದಲ್ಲೂ ತಪ್ಪದ ಕಿರಿಕಿರಿ!
ಒಮ್ಮೆ ವಿಮಾನ ತಪ್ಪಿಸಿಕೊಂಡಿದ್ದರಿಂದಲೇ ಸಾಕಷ್ಟು ತೊಂದರೆ ಅನುಭವಿಸಿದ್ದ ಪ್ರಯಾಣಿಕರಿಗೆ ವಾಪಸ್ ಪ್ರಯಾಣದ ವೇಳೆಯೂ ಸಮಸ್ಯೆ ಎದುರಾಯಿತು.
ಬೆಂಗಳೂರಿನಿಂದ ದೆಹಲಿಗೆ ಹಿಂದಿರುಗುವಾಗ ಮೊದಲಿಗೆ ಬುಕ್ ಮಾಡಿದ್ದ ಟಿಕೆಟ್ನಲ್ಲಿ ಪ್ರಯಾಣಿಸಿಲ್ಲ ಎಂಬ ಕಾರಣ ನೀಡಿ ಸಿಬ್ಬಂದಿ ಚೆಕ್ಇನ್ಗೆ ಅವಕಾಶ ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಾವು ಅದೇ ವಿಮಾನಯಾನ ಸಂಸ್ಥೆಯಲ್ಲಿ ಮತ್ತೊಂದು ಟಿಕೆಟ್ ಖರೀದಿಸಿ ಪ್ರಯಾಣಿಸಿರುವುದಾಗಿ ವಿವರಿಸಿದ ಬಳಿಕವಷ್ಟೇ ಬೋರ್ಡಿಂಗ್ಗೆ ಅನುಮತಿ ನೀಡಲಾಯಿತು.
ಇದರಿಂದ ತಮಗಾದ ಆರ್ಥಿಕ ನಷ್ಟ ಮತ್ತು ಮಾನಸಿಕ ಹಿಂಸೆಗೆ ನ್ಯಾಯ ಕೇಳಲು ಅವರು ನವದೆಹಲಿಯ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು.
ಪ್ರಯಾಣಿಕನದ್ದೇ ತಪ್ಪು ಎಂದು ವಾದಿಸಿದ ಏರ್ಲೈನ್ಸ್!
ಪ್ರಕರಣದ ವಿಚಾರಣೆ ವೇಳೆ ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ವಿರುದ್ಧವೇ ವಾದ ಮಂಡಿಸಿತು. ಪ್ರಯಾಣಿಕರು ಬೆಳಿಗ್ಗೆ 6.10ಕ್ಕೆ ಮಾತ್ರ ಚೆಕ್ಇನ್ ಕೌಂಟರ್ಗೆ ಬಂದಿದ್ದರು. ನಿಗದಿತ ಸಮಯಕ್ಕೆ ಆಗಮಿಸದ ಕಾರಣ ಅವರನ್ನು ‘ನೋ ಶೋ’ ಎಂದು ಪರಿಗಣಿಸಲಾಗಿತ್ತು ಎಂದು ತಿಳಿಸಿತು.
ಆದರೆ ಈ ವಾದಕ್ಕೆ ಪೂರಕವಾದ ಯಾವುದೇ ದಾಖಲೆಗಳನ್ನು ಸಂಸ್ಥೆ ಸಲ್ಲಿಸಲಿಲ್ಲ. ಪ್ರಯಾಣಿಕರು ಯಾವ ಸಮಯಕ್ಕೆ ಚೆಕ್ಇನ್ ಕೌಂಟರ್ಗೆ ಬಂದಿದ್ದರು ಎಂಬುದನ್ನು ಸಾಬೀತುಪಡಿಸುವ ಸಿಸಿಟಿವಿ ದೃಶ್ಯಾವಳಿಗಳನ್ನೂ ಒದಗಿಸಲಿಲ್ಲ.
ಕೊನೆಗೂ ಪ್ರಯಾಣಿಕನಿಗೆ ಸಿಕ್ತು ₹71,587 ಪರಿಹಾರ!
ಈ ಪ್ರಕರಣದ ವಿಚಾರಣೆಯನ್ನು ಆಯೋಗದ ಅಧ್ಯಕ್ಷೆ ಪೂನಂ ಚೌಧರಿ ಹಾಗೂ ಸದಸ್ಯ ಬಾರಿಕ್ ಅಹ್ಮದ್ ಅವರಿದ್ದ ಪೀಠ ನಡೆಸಿತು. ವಿಮಾನಯಾನ ಸಂಸ್ಥೆಯು ಪ್ರಯಾಣಿಕರು ತಡವಾಗಿ ಬಂದಿದ್ದರು ಎಂಬ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತು.
ಕೊನೆಗೆ ಪ್ರಯಾಣಿಕರ ಪರವಾಗಿ ತೀರ್ಪು ನೀಡಿದ ಆಯೋಗವು ವಿಮಾನಯಾನ ಸಂಸ್ಥೆಯು ಒಟ್ಟು ₹71,587 ಪರಿಹಾರ ಪಾವತಿಸುವಂತೆ ಆದೇಶಿಸಿತು.ಹೆಚ್ಚುವರಿ ವಿಮಾನ ಟಿಕೆಟ್ ವೆಚ್ಚ ಮರುಪಾವತಿ: ₹11,587, ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಪರಿಹಾರ: ₹50,000, ಕಾನೂನು ಹೋರಾಟದ ವೆಚ್ಚ: ₹10,000 ಒಟ್ಟಾರೆ ₹71,587 ಪರಿಹಾರ ನೀಡುವಂತೆ ಆಯೋಗ ಆದೇಶಿಸಿದೆ.
ಒಂದು ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಬಂದಿದ್ದರೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿಮಾನ ತಪ್ಪಿಸಿಕೊಂಡಿದ್ದ ಪ್ರಯಾಣಿಕರು, ತಮ್ಮ ಹಕ್ಕಿಗಾಗಿ ಕಾನೂನು ಹೋರಾಟ ನಡೆಸಿ ಕೊನೆಗೂ ನ್ಯಾಯ ಪಡೆದುಕೊಂಡಿದ್ದಾರೆ. ಪ್ರಯಾಣಿಕರದ್ದೇ ತಪ್ಪು ಎಂದು ವಾದಿಸಿದ್ದ ವಿಮಾನಯಾನ ಸಂಸ್ಥೆ ಸೂಕ್ತ ಸಾಕ್ಷ್ಯ ನೀಡಲು ವಿಫಲವಾಗಿದ್ದು, ಇದೀಗ ₹71 ಸಾವಿರಕ್ಕೂ ಅಧಿಕ ಪರಿಹಾರ ಪಾವತಿಸಬೇಕಾಗಿದೆ.

