ಬಾಗಲಕೋಟೆ: ಉಪಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಂದೆಡೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಮತ್ತೊಂದೆಡೆ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ವಾಗ್ದಾಳಿಗಳಲ್ಲಿ ತೊಡಗಿದ್ದಾರೆ.
ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸಿದ ಮಾಜಿ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರ ಹೆಸರಷ್ಟೇ ಹಿಂದೂ, ಆದರೆ ಅವರ ಗುಣನಡತೆಗಳಲ್ಲಿ ಹಿಂದೂ ಧರ್ಮದ ಯಾವ ಲಕ್ಷಣವೂ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.
ಯುಗಾದಿ ಮತ್ತು ದೀಪಾವಳಿ ದಿನದಂದು ಮಾಂಸಾಹಾರ ಸೇವಿಸುವ ಬಗ್ಗೆಯೂ ಟೀಕಿಸಿದರು. ಈಗ ಕಾಂಗ್ರೆಸ್ ಪಕ್ಷದವರು ಹಿಂದುತ್ವ ಮಂತ್ರ ಜಪಿಸುತ್ತಿದ್ದಾರೆ. ನಾಗಮಂಗಲದಲ್ಲಿ ಗಣೇಶ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆದಾಗ ಸಣ್ಣಪುಟ್ಟ ಘಟನೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದರು. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಲಿಲ್ಲ. ಮದ್ದೂರಿನಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ, ಅಣ್ಣಮ್ಮ ಜಾತ್ರೆ ಮೇಲೆ ಕಲ್ಲು ತೂರಾಟ, ಶಿವಾಜಿ ಜಯಂತಿಯಂದು ಚಪ್ಪಲಿ ಮತ್ತು ಕಲ್ಲು ತೂರಾಟ ನಡೆದಾಗ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ನಿಜವಾದ ಹಿಂದುಗಳಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು ಎಂದು ಅವರು ಹೇಳಿದರು.
ಇಡೀ ರಾಜ್ಯದಲ್ಲಿ ಸಮಸ್ಯೆಗಳ ಆಗರವಿದೆ. ರಾಜ್ಯದಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಪ್ರತಿ ಹುಟ್ಟುವ ಮಗುವಿನ ತಲೆಮೇಲೆ ₹1.17 ಲಕ್ಷ ಸಾಲವಿದೆ. ರಾಜ್ಯದ ಒಟ್ಟು ಸಾಲ ₹8.25 ಲಕ್ಷ ಕೋಟಿ ತಲುಪಿದೆ. ಕೆಂಗಲ್ ಹನುಮಂತಯ್ಯನವರಿಂದ ಬಸವರಾಜ್ ಬೊಮ್ಮಾಯಿ ಅವರವರೆಗಿನ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲಕ್ಕಿಂತ ಸಿದ್ದರಾಮಯ್ಯ ಅವರು ಮಾಡಿದ ಸಾಲವೇ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಅವರು “ಸಾಲಾರಾಮಯ್ಯ” ಆಗಿದ್ದಾರೆ ಎಂದು ಅವರು ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ, ರಸ್ತೆ ಅಥವಾ ಕುಡಿಯುವ ನೀರಿನ ವ್ಯವಸ್ಥೆಯೂ ಸುಧಾರಿಸಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು.
ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹ ಹೆಚ್ಚುತ್ತಿದೆ.ಮುಖ್ಯಮಂತ್ರಿ ಸ್ಥಾನಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಒಬ್ಬರು ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಳ್ಳಲು ಯತ್ನಿಸುತ್ತಿದ್ದರೆ, ಇನ್ನೊಬ್ಬರು ಆ ಕುರ್ಚಿಯನ್ನು ಎಳೆಯಲು ಯತ್ನಿಸುತ್ತಿದ್ದಾರೆ. ಅವರಿಬ್ಬರ ಹೊಡೆದಾಟ ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಹೇಳಿದರು. ಇನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಈಗಿನ ಸರ್ಕಾರದ “ಲೂಟಿ” ನೋಡಿ ಸತ್ತೋ ಹೋಗಿಬಿಟ್ಟರು. ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿದರು.

