ಹುಬ್ಬಳ್ಳಿ: ಯುವತಿಯನ್ನು ಮತಾಂತರಗೊಳಿಸಿ ಲವ್ ಜಿಹಾದ್ ಮಾಡಿರುವ ಆರೋಪ ಕೇಳಿಬಂದಿದ್ದು, ಮುಸ್ಲಿಂ ಯುವಕನನ್ನು ಹಿಡಿದು ಹಿಂದೂ ಸಂಘಟನೆ ಮುಖಂಡರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಯುವಕ ಸಮೀರ್ ನನ್ನು ಲವ್ ಜಿಹಾದ್ ಆರೋಪದಲ್ಲಿ ಹಿಂದೂ ಸಂಘಟನೆ ಮುಖಂಡರು ಹಳೇ ಹುಬ್ಬಳ್ಳಿ ಠಾಣೆಗೆ ಒಪ್ಪಿಸಿದ್ದಾರೆ. ಇದಕ್ಕೂ ಮುನ್ನ ಹಿಂದೂ ಮುಖಂಡರು ಯುವಕನ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದಾರೆ.
ಯುವಕನನ್ನು ಪೊಲೀಸರುಗೆ ಒಪ್ಪಿಸಿದ ಬೆನ್ನಲ್ಲೇ ಯುವಕನ ಪೋಷಕರು ಹುಬ್ಬಳ್ಳಿ ನಗರದ ವಿಕಾಸ ನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಯುವತಿಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ತಮ್ಮ ಮಗನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಸಮೀರ್ ತಂದೆ ಆರೋಪಿಸಿದ್ದಾರೆ.
ಸಮೀರ್ ಹಾಗೂ ಯುವತಿ ಕಳೆದ ಕೆಲ ವರ್ಷಗಳಿಂದ ಪರಿಚಯದವರು. ಆದರೆ ಅವರ ಮಧ್ಯೆ ಯಾವುದೇ ಪ್ರೀತಿ-ಪ್ರೇಮವಿಲ್ಲ. ಇಬ್ಬರೂ ಸ್ನೇಹಿತರಷ್ಟೇ. ನಮ್ಮ ಮಗ ಯಾವುದೇ ಲವ್ ಜಿಹಾದ್ ಮಾಡಿಲ್ಲ. ಅನಗತ್ಯವಾಗಿ ತನ್ನ ಮಗನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಸಮೀರ್ ತಂದೆ ತಿಳಿಸಿದ್ದಾರೆ.

