ಸೆಪ್ಟೆಂಬರ್ 27 ರಿಂದ ಕರಾವಳಿ ದ್ವೀಪ ರಾಷ್ಟ್ರ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯೊಂದಿಗೆ ಭಾರತ ಕ್ರಿಕೆಟ್ ತಂಡದ ತವರು ಸೀಸನ್ ಆರಂಭವಾಗಲಿದೆ. ಮುಂಬರುವ 2027 ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ದೃಷ್ಟಿಯಿಂದ ಈ ಸರಣಿ ಅತ್ಯಂತ ಪ್ರಮುಖವಾಗಿದೆ. ಈ ಬೆನ್ನಲ್ಲೇ ಜಿಯೋಸ್ಟಾರ್ ಜೊತೆ ಸಂಭಾಷಣೆ ನಡೆಸಿರುವ ಭಾರತದ ಪ್ರಮುಖ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ, ತಮ್ಮ ಕಂಬ್ಯಾಕ್ ಪ್ರಯಾಣ ಹಾಗೂ ಮುಂಬರುವ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಗಾಯದ ಸಮಸ್ಯೆಯಿಂದ ಹೊರಗುಳಿದು ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಮಾನಸಿಕವಾಗಿ ದೊಡ್ಡ ಸವಾಲು ಎಂದು ಪ್ರಸಿದ್ಧ್ ಹೇಳಿದ್ದಾರೆ. ಕಠಿಣ ಹಂತದಿಂದ ಹೊರಬರಲು ಕುಟುಂಬ, ಸ್ನೇಹಿತರು ಹಾಗೂ ಮ್ಯಾನೇಜ್ಮೆಂಟ್ ಬೆಂಬಲ ಅತ್ಯಗತ್ಯ. ಕೇವಲ ಗಾಯದ ನೆಪ ಹೇಳಿ ಕುಳಿತುಕೊಳ್ಳದೆ, ಮತ್ತೆ ಅಂಗಳಕ್ಕೆ ಮರಳುವಾಗ ಹಿಂದಿಗಿಂತ ಹತ್ತು ಪಟ್ಟು ಉತ್ತಮ ಪ್ರದರ್ಶನ ನೀಡಬೇಕು ಎಂಬ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಬಗ್ಗೆ ಮಾತನಾಡಿದ ಅವರು, ಅಲ್ಲಿನ ವಾತಾವರಣದಲ್ಲಿ ಬೌಲಿಂಗ್ ಮಾಡುವುದು ಪ್ರತಿಯೊಬ್ಬ ವೇಗಿಗೂ ದೊಡ್ಡ ಪರೀಕ್ಷೆಯಾಗಿದೆ. ಅಲ್ಲಿನ ವಿಕೆಟ್ಗಳಿಗೆ ತಕ್ಕಂತೆ ಬೇಗನೆ ಹೊಂದಿಕೊಳ್ಳುವುದು ಮತ್ತು ಎಲ್ಲಾ ರೀತಿಯ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಮುಖ್ಯ ಎಂದಿದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಿದ ಅನುಭವ ತಮ್ಮ ಬೆಳವಣಿಗೆಗೆ ನೆರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ಕ್ರಿಕೆಟ್ ಆಟಗಾರನಿಗೆ ಅತ್ಯಂತ ಕಠಿಣ ಮಾದರಿಯಾಗಿದ್ದು, ಪಂದ್ಯದ ವಿವಿಧ ಹಂತಗಳಲ್ಲಿ ವಿಭಿನ್ನ ತಂತ್ರಗಳನ್ನು ಬಳಸಿ ಬೌಲಿಂಗ್ ಮಾಡಬೇಕಾಗುತ್ತದೆ. 2027 ರ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದು, ಅಲ್ಲಿನ ಪಿಚ್ಗಳು ವೇಗಿಗಳಿಗೆ ಹೆಚ್ಚು ಸಹಕಾರಿಯಾಗಲಿವೆ. ಪ್ರಸ್ತುತ ಏಕದಿನದಲ್ಲಿ 300 ರಿಂದ 350 ರನ್ಗಳ ಬೃಹತ್ ಮೊತ್ತ ಸರ್ವೇಸಾಮಾನ್ಯವಾಗಿದೆ, ಇಂತಹ ಸಂದರ್ಭದಲ್ಲಿ ಎದುರಾಳಿ ರನ್ ಗತಿಯನ್ನು ಕಟ್ಟಿಹಾಕುವುದು ಬೌಲರ್ಗಳಿಗೆ ನಿಜವಾದ ಸವಾಲು ಎಂದು ಅವರು ಹೇಳಿದ್ದಾರೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3 ರವರೆಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ನಡೆಯಲಿದೆ.

