ಬಳ್ಳಾರಿ: ಜಿಲ್ಲೆಯ ಎಲ್ಲಾ 5 ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಸಂಕಷ್ಟದಲ್ಲಿರುವ ಅನ್ನದಾತರ ಕೆಸಿಸಿ ಹಾಗೂ ಅವಧಿ ಸಾಲಗಳನ್ನು ಮರುರಚನೆ ಮಾಡುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಬ್ಯಾಂಕರ್ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಬರಗಾಲ ಕುರಿತ ವಿಶೇಷ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
*ಸಾಲ ಮರುಪಾವತಿಗೆ 60 ತಿಂಗಳ ಕಾಲಾವಕಾಶ
ರೈತರ ಸಾಲಗಳನ್ನು ಮರುರಚಿಸಿ, 12 ತಿಂಗಳ ಮೊರಟೋರಿಯಂ (ಮರುಪಾವತಿ ರಿಯಾಯಿತಿ) ಅವಧಿಯೊಂದಿಗೆ ಒಟ್ಟು 60 ತಿಂಗಳುಗಳಲ್ಲಿ (ಮೊರಟೋರಿಯಂ ಅವಧಿ ಒಳಗೊಂಡಂತೆ) ಮರುಪಾವತಿಸಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಸ್ವಯಂ-ಪ್ರೇರಿತ ಮರುರಚನೆ:
27.08.2026 ರ ವೇಳೆಗೆ 30 ದಿನಗಳಿಗಿಂತ ಕಡಿಮೆ ಅವಧಿಯ ಬಾಕಿ ಹೊಂದಿರುವ ಎಲ್ಲಾ ‘ಸ್ಟಾö್ಯಂಡರ್ಡ್’ ಸಾಲಗಳಿಗೆ ಸ್ವಯಂ-ಪ್ರೇರಿತವಾಗಿ ಮರುರಚನೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದರು.
ರೈತರ ಮೇಲೆ ಒತ್ತಡ ಹೇರುವಂತಿಲ್ಲ:
ಸಾಲ ಮರುಪಾವತಿಗಾಗಿ ರೈತರಿಗೆ ಯಾವುದೇ ರೀತಿಯ ಕಿರುಕುಳ ಅಥವಾ ಒತ್ತಡ ಹೇರಬಾರದು. ಬೆಳೆ ವಿಮೆ ಪರಿಹಾರ ಬಿಡುಗಡೆಯಾಗುವವರೆಗೆ ಕಾಯದೆ ಅರ್ಹ ರೈತರಿಗೆ ಹೊಸ ಸಾಲಗಳನ್ನು ವಿತರಿಸಬೇಕು ಎಂದು ಸೂಚಿಸಿದರು.
ಖಾಸಗಿ ಲೇವಾದೇವಿದಾರರ ಹಾವಳಿಗೆ ಕಡಿವಾಣ:
ಬರಗಾಲದ ಸಂದರ್ಭದಲ್ಲಿ ರೈತರು ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಸೂಕ್ಷ್ಮ ಹಣಕಾಸು ಸಂಸ್ಥೆಗಳು ಅಥವಾ ಖಾಸಗಿ ಲೇವಾದೇವಿಗಾರರ ಬಲೆಗೆ ಬೀಳದಂತೆ ಬ್ಯಾಂಕ್ಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ನ್ಯಾಯಾಲಯದ ಆದೇಶಗಳಿದ್ದರೂ ಮಾಹಿತಿ ಕಡ್ಡಾಯ:
ರೈತರ ವಿರುದ್ಧ ಯಾವುದೇ ನ್ಯಾಯಾಲಯದ ಆದೇಶಗಳಿದ್ದರೂ, ಅವುಗಳನ್ನು ಜಾರಿಗೊಳಿಸುವ ಮುನ್ನ ಜಿಲ್ಲಾ ಸಲಹಾ ಸಮಿತಿ ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದರು.
ಸಿಇಒ ಎಚ್ಚರಿಕೆ:
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಯಾವುದೇ ಬ್ಯಾಂಕ್ ರೈತರ ವಿರುದ್ಧ ಬಲವಂತದ ಸಾಲ ವಸೂಲಾತಿ ಕ್ರಮಗಳನ್ನು ಕೈಗೊಂಡರೆ ಅಂತಹ ಬ್ಯಾಂಕರ್ಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ ಗಮನಕ್ಕೆ ತಂದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಎಲ್ಲಾ ಪ್ರಕ್ರಿಯೆಗಳ ಪ್ರಗತಿಯನ್ನು ಸಾಪ್ತಾಹಿಕವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಎಲ್ಡಿಎಂ ಗಿರೀಶ್ ಕುಲಕರ್ಣಿ, ನಬಾರ್ಡ್ ಡಿಡಿಎಂ ಯುವರಾಜ್, ಎಸ್ಬಿಐ ಆರ್ಎಂ ರವಿ ಬಿ. ಮೇಶ್ರಾಮ್, ಸಿಬಿಆರ್ಸೆಟಿ ನಿರ್ದೇಶಕ ವಿನೋದ್ ಕೊಲ್ಲೂರುಮಠ, ಪಶುಪಾಲನಾ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಬ್ಯಾಂಕ್ ಸಂಯೋಜಕರು ಉಪಸ್ಥಿತರಿದ್ದರು.
* ಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡ
ಬಳ್ಳಾರಿ : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈಳಿಗೆ ಮಣೆಯಿಂದ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಅಪರಾಧಿಗೆ ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 61,000 ದಂಡ ವಿಧಿಸಿ ತೀರ್ಪು ನೀಡಿದೆ.
ಸಿರುಗುಪ್ಪ ತಾಲೂಕಿನ ಕುರುವಳ್ಳಿ ಗ್ರಾಮದ ನಿವಾಸಿ ಶೇಖರ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಕುಡಿದು ಗಲಾಟೆ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ದ್ವೇಷ ಕಟ್ಟಿಕೊಂಡಿದ್ದ ಶೇಖರ, 2025ರ ಫೆಬ್ರವರಿ 27ರ ರಾತ್ರಿ ದೂರುದಾರರ ಮೇಲೆ ಈಳಿಗೆ ಮಣೆಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದನು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಮೂಳೆ ಮುರಿತವಾಗಿತ್ತು.
ಹಚ್ಚೊಳ್ಳಿ ಠಾಣೆ ಪೊಲೀಸರು ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿದ್ದಲಿಂಗಪ್ರಭು ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ ಶೇ. 95 ರಷ್ಟನ್ನು ಸಂತ್ರಸ್ತರಿಗೆ ನೀಡುವಂತೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಹೆಚ್ಚುವರಿ ಪರಿಹಾರ ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಂ.ಬಿ. ಸುಂಕಣ್ಣ ವಾದ ಮಂಡಿಸಿದ್ದರು.

