ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅನಾರೋಗ್ಯದಿಂದ ಶನಿವಾರ ವಿಧಿವಶರಾಗಿದ್ದಾರೆ. ನಾಳೆ ಸೋಮವಾರ ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಅಜ್ಜಿ ಚೆನ್ನಮ್ಮ ಅವರ ನಿಧನ ಸುದ್ದಿ ಕೇಳಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟಿದ್ದಾರೆ. ಅಜ್ಜಿ ಚೆನ್ನಮ್ಮರ ಪ್ರೀತಿಯ ಮೊಮ್ಮಗನಾಗಿದ್ದರೂ ಆಕೆಯ ಕೊನೆ ಕಾಲದಲ್ಲಿ ಕನಿಷ್ಠ ಅವರ ಮುಖವನ್ನು ನೋಡಲೂ ಸಾಧ್ಯವಾಗದ ಕಾರಣ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ರಾತ್ರಿಯಿಡೀ ನಿದ್ದೆ ಮಾಡದೆ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ನಾಳೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಜ್ವಲ್ ರೇವಣ್ಣ ಪರೋಲ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಬೆಂಗಳೂರಿನ ಪದ್ಮನಾಭನಗರದಿಂದ ರಸ್ತೆ ಮಾರ್ಗವಾಗಿ ಚೆನ್ನಮ್ಮ ಅವರ ಪಾರ್ಥೀವಶರೀರದ ಅಂತಿಮ ಯಾತ್ರೆ ಹಾಸನ ಜಿಲ್ಲೆಯ ಹೊಳೆನರಸೀಪುರವರೆಗೆ ನಡೆಯಲಿದೆ.
ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಸಮೀಪದ ಕ್ಯಾತನಹಳ್ಳಿ ಬಳಿ ಇರುವ ದೇವೇಗೌಡರ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಚೆನ್ನಮ್ಮನವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನದ ವೇಳೆಗೆ ನಡೆಯಲಿದೆ. ಅಂತಿಮ ವಿಧಿ ವಿಧಾನ ನಡೆಯಲಿರುವ ಜಾಗದಲ್ಲಿ ನೆಲ ಸಮತಟ್ಟು ಮಾಡುವ ಜೊತೆಗೆ ಶಾಮಿಯಾನ ಹಾಗೂ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ 4 ಸಾವಿರ ಕುರ್ಚಿಗಳನ್ನು ತರಿಸಿ ಸ್ಥಳದಲ್ಲಿ ಹಾಕಲು ವ್ಯವಸ್ಥೆ ನಡೆಯುತ್ತಿದೆ. ಅಂತ್ಯಕ್ರಿಯೆಯಲ್ಲಿ ರಾಜ್ಯದ ವಿವಿಧ ಭಾಗದ ಜನಪ್ರತಿನಿಧಿಗಳು ಭಾಗಿಯಾಗುವ ಸಾಧ್ಯತೆ ಹಿನ್ನೆಲೆ ಅಗತ್ಯ ತಯಾರಿ ನಡೆಸಲಾಗುತ್ತಿದೆ

