ಗದಗ: ಎಸ್ಐಆರ್ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.
ಬಾಗೇವಾಡಿಯ ರತ್ನಮ್ಮ ಬಳಿಗಾರ(43) ಮೃತಪಟ್ಟವರು. ಎಸ್ಐಆರ್ ಹಿನ್ನೆಲೆಯಲ್ಲಿ ಬಿಎಲ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಎಸ್ಐಆರ್ ಪ್ರಗತಿ ಪರಿಶೀಲನೆ ನಡೆಸಿದ್ದರು. ಗ್ರಾಮದ ಮಹೇಶ ಗೌಡ ಪಾಟೀಲ್ ಅವರ ಮನೆಯಲ್ಲಿ ಶಾಸಕರು ಮತ್ತು ಸಿಬ್ಬಂದಿಗೆ ಚಹಾ ವ್ಯವಸ್ಥೆ ಮಾಡಲಾಗಿತ್ತು.
ಸಭೆಯ ನಂತರ ಚಹಾ ಕುಡಿಯುವ ವೇಳೆ ರತ್ನಮ್ಮ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ರತ್ನಮ್ಮ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

