ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ 14ನೇ ಆರೋಪಿ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮಾಫಿ ಸಾಕ್ಷಿಯಾಗಿ ಪ್ರಕರಣದಿಂದ ಪಾರಾಗಲು ಯತ್ನಿಸುತ್ತಿದ್ದ ಪ್ರದೋಷ್ ಬೇರೆ ಕೈದಿಯೊಬ್ಬನ ಹೆಸರಲ್ಲಿ ಫೋನ್ ನಂಬರ್ ಪಡೆದುಕೊಂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.
ಜೈಲಿನಲ್ಲಿರುವ ಆರೋಪಿಗಳಿಗೆ ವಕೀಲರ ಜೊತೆ ಹಾಗೂ ಕುಟುಂಬದವರ ಜೊತೆ ಮಾತನಾಡುವುದಕ್ಕೆ 3 ನಂಬರ್‌ಗಳನ್ನು ಕೊಡಲಾಗುತ್ತದೆ. ವಕೀಲರ ಜೊತೆ ಹಾಗೂ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಕೊಡುವ ನಂಬರ್ ಅನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆ. ಈ ನಂಬರ್‌ಗಳನ್ನ ನಮೂದು ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಮೌನೇಶ್.ಹೆಚ್.ಕೋರಿ ಎಂಬ ಸಿಬ್ಬಂದಿಗೆ ವಹಿಸಲಾಗಿತ್ತು.
ಆರೋಪಿ ಪ್ರದೋಷ್ ಬೇರೆ ಕೈದಿ ಹೆಸರಿನಲ್ಲಿ ನಂಬರ್ ಪಡೆದಿದ್ದ. ಈ ನಂಬರ್ ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಹಾಯ ಮಾಡಿದ್ದ. ಅಲ್ಲದೇ ವಕೀಲರ ನಂಬರ್ ಎಂದು ನಮೂದಿಸಿ ಪತ್ನಿಯ ಜೊತೆ ಮಾತನಾಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಸದ್ಯ ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೌನೇಶ್ ಹಾಗೂ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ.
ವಂದೇ ಮಾತರಂ ಗೀತೆ 2 ಚರಣಕ್ಕೆ ಮೊಟಕು ವಿವಾದ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ
ಬೆಂಗಳೂರು: ವಂದೇ ಮಾತರಂ ಗೀತೆಯ 2 ಚರಣ ಮಾತ್ರ ಹಾಡಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ರಾಷ್ಟ್ರಗೀತೆಯನ್ನು ಕಡಿತಗೊಳಿಸುವ ಕಾನೂನು ವ್ಯಾಪ್ತಿ ರಾಜ್ಯ ಸರ್ಕಾರಕ್ಕಿಲ್ಲ ಎಂದು ವಕೀಲ ಗಿರೀಶ್ ಭಾರದ್ವಾಜ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಕಾಯ್ದೆಯಿಂದ ಮಾಡಲಾಗದ್ದನ್ನು ರಾಜ್ಯಸರ್ಕಾರ ಆದೇಶದಿಂದ ಮಾಡಹೊರಟಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಂದೇ ಮಾತರಂ ಗೀತೆಯನ್ನು 2 ಚರಣಗಳಿಗೆ ಮೊಟಕುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಹೀಗೆ ಮಾಡಲು ರಾಜ್ಯ ಸರ್ಕಾರ ಅಧಿಕಾರವಿಲ್ಲ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8ರ ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ವಲೀಕ ಗಿರೀಶ್ ಭಾರದ್ವಾಜ್ ಮನವಿ ಮಾಡಿದ್ದಾರೆ.
ಸಚಿವ ಸಂಪುಟದ ನಿರ್ಣಯ ಆಧರಿಸಿ ರಾಜ್ಯ ಸರ್ಕಾರ ಈ ಬಗ್ಗೆ ಆದೇಶಿಸಿತ್ತು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ 2 ಚರಣ ಮಾತ್ರ ಹಾಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.
ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ದೇಶದ ಜನರಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ ‘ವಂದೇ ಮಾತರಂ’ ಗೀತೆಯು ಮಹತ್ವದ ಪಾತ್ರವನ್ನು ವಹಿಸಿರುತ್ತದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ವಂದೇ ಮಾತರಂ ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿ ಹಾಗೂ ವಿವಿಧ ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅದರ ಗಾಯನ ಅಥವಾ ವಾದನಕ್ಕೆ ಸಂಬಂಧಿಸಿದಂತೆ ಸಂದರ್ಭಾನುಸಾರ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆ ಮಾರ್ಗಸೂಚಿಗಳಲ್ಲಿ ರಾಷ್ಟ್ರೀಯ ಗೀತೆಯ ವಾದನ ಮತ್ತು ಸಾಮೂಹಿಕ ಗಾಯನಕ್ಕೆ ಸಂಬಂಧಿಸಿದ ಸಂದರ್ಭಗಳನ್ನು ಪ್ರತ್ಯೇಕವಾಗಿ ನಿರ್ದಿಷ್ಟಪಡಿಸಲಾಗಿದೆ.
ರಾಜ್ಯದಲ್ಲಿ ನಡೆಯುವ ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳ ಸ್ವರೂಪ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಗೀತೆಯ ವಾದನ/ಗಾಯನಕ್ಕೆ ಸಂಬಂಧಿಸಿದಂತೆ ಏಕರೂಪತೆ, ಗೌರವ ಮತ್ತು ಸೂಕ್ತ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಸರ್ಕಾರವು ಪರಿಗಣಿಸಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿತ್ತು.

