ಉಡುಪಿ: ಉಡುಪಿ ಜಿಲ್ಲೆಯ ಶಿರ್ವ ಕುರ್ಕಾಲು ಶಂಕರಪುರ ಬಳಿ ಫೆಬ್ರವರಿ 21ರಂದು ಬೆಳಗ್ಗೆ ಮಹಿಳೆಯ ಚಿನ್ನದ ಸರ ದೋಚಿದ್ದ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಮೂರು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಲೆನ್ ಡಿಸೋಜಾ(69) ಅವರು ಮನೆಯ ಹಿಂಬದಿಯಲ್ಲಿ ಮಲ್ಲಿಗೆ ಕಟ್ಟುತ್ತಿದ್ದ ವೇಳೆ ಈ ಹಿಂದೆ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಆನಂದ ಮತ್ತು ಇತರ ಇಬ್ಬರು ಬಾಡಿಗೆ ರೂಂ ವಿಚಾರಿಸಲು ಬಂದಿದ್ದಾರೆ. ಆದರೆ ರೂಂ ಇಲ್ಲದ ಕಾರಣ ಬೇರೆ ಮನೆ ಕಡೆಗೆ ಹೋಗಿದ್ದಾರೆ. ಅವರಲ್ಲಿ ಒಬ್ಬ ವಾಪಸ್ ಬಂದು ಅವರ ಮೊಬೈಲ್ ನಂಬರ್ ಕೇಳಿದ್ದಾನೆ. ಮೊಬೈಲ್ ನಂಬರ್ ಹೇಳುವಾಗ ಹೆಲೆನ್ ಅವರ ಕುತ್ತಿಗೆಗೆ ಕೈ ಹಾಕಿ 3.50 ಲಕ್ಷ ರೂಪಾಯಿ ಮೌಲ್ಯದ 28 ಗ್ರಾಂ ತೂಕದ ಚಿನ್ನದ ಸರ ಎಳೆದುಕೊಂಡು ಪರಾರಿಯಾಗಿದ್ದಾನೆ. ಆತನನ್ನು ಹಿಡಿಯಲು ಹೆಲೆನ್ ಮತ್ತು ಅವರ ಅಕ್ಕ ಪ್ರಯತ್ನಿಸಿದ್ದು ಅವರನ್ನು ದೂಡಿ ಮೂವರು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸಮೀಪದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಪಲ್ಸರ್ ಬೈಕ್ ನಲ್ಲಿ ಆರೋಪಿಗಳು ಬಂದು ಹೋಗಿರುವುದು ಗೊತ್ತಾಗಿದೆ. ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ನೀಡಿಸಲಾಗಿದೆ. ನಾಕಾಬಂಧಿ ಹಾಕಿ ಕೃತ್ಯ ನಡೆದ ಮೂರು ಗಂಟೆಯೊಳಗೆ ಶಿರೂರ ಚೆಕ್ ಪೋಸ್ಟ್ ನಲ್ಲಿ ಬೈಂದೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಶಿರ್ವ ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಂಧಿತ ಆರೋಪಿಗಳಿಂದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಕಾಪು ಸಿಪಿಐ ನಿರೀಕ್ಷಕ ಅಜ್ಮತ್ ಅಲಿ ನೇತೃತ್ವದಲ್ಲಿ ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಎಸ್ಐ ಸುನಿಲ್ ಕುಮಾರ್ ಹಾಗೂ ಶಿರ್ವ ಠಾಣೆಯ ದಯಾನಂದ, ಪ್ರಭು, ಅನ್ವರ್ ಅಲಿ, ಹರೀಶ, ಯಲ್ಲಾಲಿಂಗ, ಸುರೇಶ ಸೇರಿದಂತೆ ಬೈಂದೂರು ಮತ್ತು ಶಿರ್ವ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

