ಬೆಂಗಳೂರು: ಎರಡು ದಶಕಗಳಿಂದ ಉನ್ನತ ಶಿಕ್ಷಣದಲ್ಲಿ ನೇಮಕಾತಿ ಆಗಿಲ್ಲ. ರಾಜ್ಯದ ಪ್ರಮುಖ ವಿವಿಗಳಲ್ಲಿ ಶೇಕಡ 60 ರಿಂದ 70ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಸಾರ್ವಜನಿಕ ವಿಶ್ವ ವಿದ್ಯಾಲಯಗಳ ಕುಲಪತಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು, ಈ ವರೆಗಿನ ಸಾಧನೆಗಳ ಮಾಹಿತಿ ಪಡೆದು, ಸಲಹೆ ಸೂಚನೆಗಳನ್ನು ನೀಡಿದರು.
ಸರ್ಕಾರಿ ಕಾಲೇಜು ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್ ಗಳಲ್ಲಿ ಖಾಲಿ ಇರುವ ಎರಡು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸಹಾಯಕರ ಪ್ರಾಧ್ಯಾಪಕರ ಹುದ್ದೆ ಭರ್ತಿ ಪ್ರಕ್ರಿಯೆ ಆರಂಭವಾಗಿದೆ. 2024 -25 ನೇ ಸಾಲಿನಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಗೆ 1016 ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯಗಳು ವಿಶ್ವದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಮಕ್ಕಳಿಗೆ ಪರಿಚಯಿಸಬೇಕು. ವಿದ್ಯಾರ್ಥಿಗಳನ್ನು ವಿಶ್ವಪ್ರಜೆಯನ್ನಾಗಿಸಲು ಬೇಕಾದ ವೇದಿಕೆಯನ್ನು ಸಿದ್ಧಪಡಿಸಬೇಕು. ಜಾತಿ, ಮತ, ಧರ್ಮ ಮೀರಿ ವೈಜ್ಞಾನಿಕತೆ ಮತ್ತು ವೈಚಾರಿಕೆಯನ್ನು ಬೆಳೆಸಬೇಕು. ಆದರೆ ವಿಶ್ವವಿದ್ಯಾಲಯಗಳು ಜಾತಿಕೂಪಗಳಾಗುತ್ತಿವೆ. ಇದರಿಂದ ಯುವಜನತೆಯನ್ನು ಹೊರ ತರುವ ಕೆಲಸ ಮಾಡಬೇಕು. ಇದಕ್ಕಾಗಿ ಏನು ಮಾಡಬೇಕೆಂಬ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದರು.
ವಿಶ್ವವಿದ್ಯಾಲಯಗಳು ಕೇವಲ ಸರ್ಕಾರಿ ನಿಧಿಯನ್ನು ಅವಲಂಬಿಸದೆ, ಸಿಎಸ್‌ಆರ್(CSR) ಯೋಜನೆಗಳು ಮತ್ತು ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್(Alumni Network) ಮೂಲಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಮುಂದಾಗಬೇಕು ಎಂದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.

