ಕಲಬುರಗಿ: ಜಾಮೀನು ಪಡೆದು ಆರೋಪಿಗಳು ಠಾಣೆಗೆ ಹಾಜರಾಗಿದ್ದರೂ ವಿಚಾರಣೆಗೆ ಹಾಜರಾಗುತ್ತಿಲ್ಲವೆಂದು ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ ಬ್ರಹ್ಮಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಯೇ ಆರೋಪಿಗಳಿಗೆ ತಲಾ 50 ಸಾವಿರ ರೂ. ಪಾವತಿಸುವಂತೆ ಕಲಬುರಗಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಠಾಣಾಧಿಕಾರಿ ಸಲ್ಲಿಸಿದ ತಪ್ಪು ಮಾಹಿತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ 2024 ಡಿಸೆಂಬರ್ 19ರಂದು ಸ್ಟೋನ್ ಕ್ರಞರ್ ಮಷಿನ್ ಹೆಸರಲ್ಲಿ ಒಂದು ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಾವುದ್ದೀನ್ ಶೇಖ್, ಶಬಾನ ಬೇಗಂ, ಸರ್ವರ್ ಮತೀನ್ ಶೇಖ್ ವಿರುದ್ಧ ಅಂದಿನ ಠಾಣಾಧಿಕಾರಿ ಸೋಮಲಿಂಗ ಕಿರದಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಗಳು ಜಾಮೀನು ಪಡೆದು ಠಾಣೆಗೆ ಹಾಜರಾಗಿದ್ದರೂ ವಿಚಾರಣೆಗೆ ಹಾಜರಾಗುತ್ತಿಲ್ಲವೆಂದು ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಸೋಮಲಿಂಗ ಕೆರದಳ್ಳಿಯಿಂದ ಆರೋಪಿಗಳಿಗೆ ತಲಾ 50 ಸಾವಿರ ರೂ. ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅವರ ವಿರುದ್ಧ ಇಲಾಖಾ ಕ್ರಮಕ್ಕೂ ನ್ಯಾಯಾಲಯ ಸೂಚನೆ ನೀಡಿದೆ.

