HomeKarnatakaರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ಸಂವಿಧಾನದ ಮೇಲಿನ ದಾಳಿ, ಬಿಜೆಪಿ ಮನಸ್ಥಿತಿ ಬಹಿರಂಗ: ಜಿ. ಪರಮೇಶ್ವರ್

ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ಸಂವಿಧಾನದ ಮೇಲಿನ ದಾಳಿ, ಬಿಜೆಪಿ ಮನಸ್ಥಿತಿ ಬಹಿರಂಗ: ಜಿ. ಪರಮೇಶ್ವರ್

ಬೆಂಗಳೂರು: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೇಲೆ ನಡೆದಿರುವ ಗಂಭೀರ ದಾಳಿ. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದ ನಾಯಕರನ್ನೇ ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಬಿಜೆಪಿ ಸರ್ಕಾರ ತನ್ನ ನಿಜವಾದ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದ್ವಾನಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ, ಅವರು ಭೇಟಿ ನೀಡಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಲಾಗಿದೆ. ದೇಶದ ಪ್ರಮುಖ ದಲಿತ ನಾಯಕರೊಬ್ಬರು ಭೇಟಿ ನೀಡಿದ ನಂತರ ಇಂತಹ ಕೃತ್ಯ ನಡೆದಿರುವುದು ಸಾಮಾನ್ಯ ಸಂಗತಿಯಲ್ಲ. ಇದು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯದ ಮನೋಭಾವದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.

ದಲಿತ ನಾಯಕರೊಬ್ಬರು ಭೇಟಿ ನೀಡಿದ ಸ್ಥಳವನ್ನು ‘ಶುದ್ಧೀಕರಿಸುವುದು’ ದೇಶದ ಸಂವಿಧಾನದಡಿ ಸ್ವೀಕಾರಾರ್ಹವೇ? ಇಲ್ಲದಿದ್ದರೆ ಈ ಕೃತ್ಯ ಎಸಗಿದವರನ್ನು ಶಿಕ್ಷಿಸಬೇಕಲ್ಲವೇ? ಇಂಥದ್ದೊಂದು ಸರಳ ಪ್ರಶ್ನೆಯನ್ನು ರಾಹುಲ್ ಗಾಂಧಿ ಅವರು ಕೇಳಿದ್ದಾರೆ. ಜಾತಿ ತಾರತಮ್ಯವನ್ನು ಪ್ರಶ್ನಿಸಿದ್ದಾರೆ. ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಬಿಜೆಪಿ ಸರ್ಕಾರ ಮಾಡಿದ್ದೇನು? ಜಾತಿ ತಾರತಮ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿದೆ. ಇದಕ್ಕಿಂತ ವಿಪರ್ಯಾಸ ಮತ್ತೇನಿದೆ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಇದಕ್ಕಿಂತಲೂ ಆಘಾತಕಾರಿ ಸಂಗತಿಯೆಂದರೆ, ದಲಿತರ ಗೌರವ, ಸಮಾನತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಪರವಾಗಿ ಮಾತನಾಡಿದ ರಾಹುಲ್ ಗಾಂಧಿ ಅವರ ವಿರುದ್ಧವೇ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದು. ದಲಿತರ ರಕ್ಷಣೆಗೆ ರೂಪಿಸಲಾಗಿರುವ ಕಾನೂನನ್ನು ದಲಿತರ ಪರವಾಗಿ ಧ್ವನಿ ಎತ್ತುವವರ ವಿರುದ್ಧ ಬಳಸುತ್ತಿರುವುದು ಕಾನೂನಿನ ದುರುಪಯೋಗವಲ್ಲದೆ ಮತ್ತೇನು ಎಂದಿದ್ದಾರೆ.

ಅಸ್ಪೃಶ್ಯತೆಯ ವಿರುದ್ಧ ಮಾತನಾಡುವುದು ಅಪರಾಧವೇ? ಜಾತಿ ತಾರತಮ್ಯವನ್ನು ಪ್ರಶ್ನಿಸುವುದು ಅಪರಾಧವೇ? ದಲಿತರ ಸ್ವಾಭಿಮಾನಕ್ಕಾಗಿ ಧ್ವನಿ ಎತ್ತುವುದು ಅಪರಾಧವೇ? ಎನ್ನುವುದು ನನ್ನ ಪ್ರಶ್ನೆ. ಭಾರತದ ಸಂವಿಧಾನವು ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಕಟ್ಟಿಕೊಟ್ಟ ಸಂವಿಧಾನದ ಆಶಯಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಆದರೆ, ಆ ಆಶಯಗಳ ಪರವಾಗಿ ಮಾತನಾಡುವವರನ್ನೇ ಬೆದರಿಸುವುದು ಮತ್ತು ಪ್ರಕರಣಗಳಲ್ಲಿ ಸಿಲುಕಿಸುವುದು ಸಂವಿಧಾನದ ಮೇಲೆ ಬಿಜೆಪಿಗಿರುವ ಅಗೌರವವನ್ನು ತೋರುತ್ತದೆ.

ಪೊಲೀಸ್ ಪ್ರಕರಣಗಳ ಮೂಲಕ ರಾಹುಲ್ ಗಾಂಧಿಯವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಅವರ ಜೊತೆ ನನ್ನಂತಹ ಕೋಟ್ಯಂತರ ಭಾರತೀಯರಿದ್ದಾರೆ. ದಲಿತ ಸಮುದಾಯದವನಾಗಿ ನನ್ನ ಸಂಪೂರ್ಣ ಬೆಂಬಲ ಅವರಿಗಿದೆ.

ಇಂತಹ ಘಟನೆಗಳಿಂದ ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎತ್ತುವುದನ್ನು ನಾವು ನಿಲ್ಲಿಸುವುದಿಲ್ಲ. ಬದಲಿಗೆ ಜಾತಿ ತಾರತಮ್ಯದ ವಿರುದ್ಧದ ಹೋರಾಟವನ್ನು ನಾವು ಮತ್ತಷ್ಟು ತೀವ್ರಗೊಳಿಸುತ್ತೇವೆ. ದಲಿತರ ಸ್ವಾಭಿಮಾನ ಮತ್ತು ಘನತೆಯ ಪರವಾಗಿ ಕಾಂಗ್ರೆಸ್ ಪಕ್ಷದ ಧ್ವನಿ ಇನ್ನಷ್ಟು ಗಟ್ಟಿಯಾಗಲಿದೆ.

ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ತಕ್ಷಣವೇ ಹಿಂಪಡೆಯಬೇಕು. ಹಲ್ದ್ವಾನಿಯಲ್ಲಿ ನಡೆದಿರುವ ‘ಶುದ್ಧೀಕರಣ’ದ ಹೆಸರಿನ ಆಚರಣೆಯ ಕುರಿತು ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಂವಿಧಾನವನ್ನು ದುರ್ಬಲಗೊಳಿಸುವ, ಜಾತಿ ತಾರತಮ್ಯವನ್ನು ಸಮರ್ಥಿಸುವ ಮತ್ತು ಸಾಮಾಜಿಕ ನ್ಯಾಯದ ಧ್ವನಿಯನ್ನು ಹತ್ತಿಕ್ಕುವ ಯಾವುದೇ ಪ್ರಯತ್ನದ ವಿರುದ್ಧ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೋರಾಡಲಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular