ಬಳ್ಳಾರಿ: ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ವ್ಯಾಪ್ತಿಯಲ್ಲಿ 2026-27ನೇ ಸಾಲಿನ ಮುಂಗಾರು ಬೆಳೆಗಳು ಹಾಗೂ ಕುಡಿಯುವ ನೀರಿನ ಅಗತ್ಯತೆಗಾಗಿ ಕಾಲುವೆಗಳಿಗೆ ನೀರು ಹರಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಿವರಾಜ ಎಸ್. ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ 127ನೇ ನೀರಾವರಿ ಸಲಹಾ ಸಮಿತಿ ಸಭೆ ಜರುಗಿತು. ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ವಿಸ್ತೃತ ಚರ್ಚೆ ನಡೆಸಲಾಯಿತು.
‘ಎಲ್ ನಿನೊ’’ ಪ್ರಭಾವದಿಂದ ಉಂಟಾಗಿರುವ ಮಳೆಯ ಅಭಾವ ಮತ್ತು ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಲಭ್ಯವಿರುವ ನೀರನ್ನು ಮುಂಗಾರು ಹಂಗಾಮಿನ ಬೆಳೆಗಳು ಮತ್ತು ಮುಂಬರುವ ಬೇಸಿಗೆಯ ಕುಡಿಯುವ ನೀರಿಗಾಗಿ ಕೆರೆ-ಕಟ್ಟೆಗಳನ್ನು ತುಂಬಿಸಲು ಕಾಯ್ದಿರಿಸಿ, ಕಾಲುವೆಗಳಿಗೆ ಕೆಳಗಿನಂತೆ ನೀರು ಹರಿಸಲು ತೀರ್ಮಾನಿಸಲಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ:
ಅಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ 3,800 ಕ್ಯೂಸೆಕ್ ನಂತೆ (ಗಣೇಕಲ್ ವಿಭಾಗದಿಂದ 200 ಕ್ಯೂಸೆಕ್ ಉಳಿತಾಯದೊಂದಿಗೆ) ನೀರು ಒದಗಿಸಲಾಗುವುದು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ:
ಅಕ್ಟೋಬರ್ 21 ರಿಂದ 24 ರವರೆಗೆ 1,000 ಕ್ಯೂಸೆಕ್ ಹರಿಸಲಾಗುವುದು. ನಂತರ ಅಕ್ಟೋಬರ್ 25 ರಿಂದ 31 ರವರೆಗೆ ನೀರು ಸ್ಥಗಿತಗೊಳಿಸಿ, ಪುನಃ ನವೆಂಬರ್ 01 ರಿಂದ 20 ರವರೆಗೆ 20 ದಿನಗಳ ಕಾಲ 1,280 ಕ್ಯೂಸೆಕ್ ನಂತೆ (ಅಥವಾ ನೀರಿನ ಲಭ್ಯತೆ ಇರುವವರೆಗೆ) ನೀರು ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ:
ಅಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ 650 ಕ್ಯೂಸೆಕ್ ನಂತೆ ನೀರಿನ ಲಭ್ಯತೆಯ ಮೇರೆಗೆ ಹರಿಸಲಾಗುವುದು.
ರಾಯ ಬಸವಣ್ಣ ಕಾಲುವೆ:
ಅಕ್ಟೋಬರ್ 21 ರಿಂದ 2027 ರ ಮೇ 31 ರವರೆಗೆ 180 ಕ್ಯೂಸೆಕ್ ನಂತೆ 10 ದಿನ ನೀರು ಹರಿಸುವುದು ಮತ್ತು 10 ದಿನ ಸ್ಥಗಿತಗೊಳಿಸುವ ಮಾದರಿಯಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಒದಗಿಸಲಾಗುವುದು.
ವಿಜಯನಗರ ಎಡದಂಡೆ ಕಾಲುವೆಗಳು:
ಅಕ್ಟೋಬರ್ 21 ರಿಂದ 2027 ರ ಮೇ 10 ರವರೆಗೆ 60 ಕ್ಯೂಸೆಕ್ ನಂತೆ ನೀರಿನ ಲಭ್ಯತೆಗೆ ತಕ್ಕಂತೆ ಹರಿಸಲು ತೀರ್ಮಾನಿಸಲಾಗಿದೆ.
ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ಮತ್ತು ಬೇಸಿಗೆಯ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸುವುದು ಅತ್ಯಂತ ಅಗತ್ಯವಾಗಿರುವುದರಿಂದ, ರೈತ ಬಾಂಧವರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ನೀರಾವರಿ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಸುಂಡಿ ಗ್ರಾಮದಲ್ಲಿ ಜಪ್ತಿ ಮಾಡಲಾದ 445 ಕ್ವಿಂಟಾಲ್ ಜೋಳ: ಅಕ್ಟೋಬರ್ 28 ರಂದು ಬಹಿರಂಗ ಹರಾಜು
ಬಳ್ಳಾರಿ: ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದ ವೇಳೆ ವಶಪಡಿಸಿಕೊಳ್ಳಲಾದ 445 ಕ್ವಿಂಟಾಲ್ ಜೋಳವನ್ನು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಈ ಕುರಿತು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು, ಜಪ್ತಿ ಮಾಡಲಾದ 445 ಕ್ವಿಂಟಾಲ್ ಜೋಳವನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
ಅಕ್ಟೋಬರ್ 28 ರಂದು ಬೆಳಗ್ಗೆ 11.30 ಗಂಟೆಗೆ ಬಳ್ಳಾರಿಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎಪಿಎಂಸಿ ಸಗಟು ಗೋದಾಮಿನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದೆ.
ಆಸಕ್ತ ಬಿಡ್‌ದಾರರು ನಿಗದಿತ ಷರತ್ತುಗಳೊಂದಿಗೆ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಬಳ್ಳಾರಿ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


