HomeLatest Newsಲೋಕಸಭೆಯಲ್ಲಿ ಪ್ರಧಾನಿ ಮೋದಿ ಉತ್ತರಿಸದಿರುವುದು ಸಂಸತ್ ಗೆ ತೋರಿದ ಅಗೌರವ, ಹೇಡಿತನ: ಸಿಎಂ ಸಿದ್ಧರಾಮಯ್ಯ

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಉತ್ತರಿಸದಿರುವುದು ಸಂಸತ್ ಗೆ ತೋರಿದ ಅಗೌರವ, ಹೇಡಿತನ: ಸಿಎಂ ಸಿದ್ಧರಾಮಯ್ಯ

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ಮೋದಿ ಅವರು ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸಂಸತ್‌ಗೆ ತೋರಿಸಿರುವ ಅಗೌರವ ಮಾತ್ರವಲ್ಲ, ಸತ್ಯವನ್ನು ಎದುರಿಸಲಾಗದ ಹೇಡಿತನವೂ ಆಗಿದೆ‌ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಭಾರತದ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯವರ ಉತ್ತರ ಇಲ್ಲದೆ ವಂದನಾ ನಿರ್ಣಯವನ್ನು ಅಂಗೀಕರಿಸಲಾಗಿದೆ. ಓರ್ವ ಪ್ರಧಾನಿ ಸಂಸತ್ತನ್ನು ನಿರ್ಲಕ್ಷಿಸುವುದೆಂದರೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಡೆ ಎಂದರ್ಥ ಎಂದು ತಿಳಿಸಿದ್ದಾರೆ.

ಅಧಿಕಾರರೂಢ ಬಿಜೆಪಿ ಪಕ್ಷ ಮೊದಲು ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡದೆ ತಡೆಯಿತು, ನಂತರ ತಾನೂ ಕೂಡಾ ಮಾತನಾಡದೆ ಮೌನಕ್ಕೆ ಶರಣಾಯಿತು. ಇದು ಬಹಳ ಆತಂಕಕಾರಿ ಬೆಳವಣಿಗೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವಂದನಾ ನಿರ್ಣಯದ ಭಾಷಣದಲ್ಲಿ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಅವರ ಪುಸ್ತಕದಲ್ಲಿದ್ದ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾದಾಗ ಅವರ ಮಾತನ್ನು ಸಂಪೂರ್ಣವಾಗಿ ತಡೆಯಲಾಯಿತು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆ ಪುಸ್ತಕದಲ್ಲಿ 2020ರ ಚೀನಾ ಗಡಿ ಸಂಘರ್ಷದ ಸಂದರ್ಭ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಮುಖ್ಯಸ್ಥರಿಗೆ ಕೇವಲ ”ಜೋ ಉಚಿತ್ ಸಮಝೋ, ವೋಹ್ ಕರೋ” (ನಿಮಗೆ ಯೋಗ್ಯವೆನಿಸಿದ್ದನ್ನು ಮಾಡಿ) ಎಂದು ಹೇಳಿದ್ದಾಗಿ ದಾಖಲಾಗಿದೆ. ಇದು ಪ್ರಧಾನಿ ಮೋದಿಯವರ ನಾಯಕತ್ವದ ಟೊಳ್ಳುತನವನ್ನು ಜಗಜ್ಜಾಹೀರುಗೊಳಿಸಿರುವುದು ಮಾತ್ರವಲ್ಲ, ಮೋದಿ ತಾನೇ ಕಟ್ಟಿಕೊಂಡಿರುವ 56 ಇಂಚಿನ ಎದೆಯೊಳಗಿನ ಪುಕ್ಕಲುತನವನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ.

ಪ್ರಧಾನಿಯವರ ಈ ಪಲಾಯನವಾದಿ ನಡೆಯು ಸಂಸತ್ತಿನಲ್ಲಿ ಚರ್ಚೆ ಆಗಬಾರದೆಂಬ ಕಾರಣಕ್ಕೆ ರಾಹುಲ್ ಗಾಂಧಿಯವರು ಭಾಷಣ ಮಾಡದಂತೆ ತಡೆಯಲಾಗಿದೆ. ದೇಶದ ಬಹುಸಂಖ್ಯೆಯ ಜನರನ್ನು ಪ್ರತಿನಿಧಿಸುವ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇಂತಹ ಗಂಭೀರ ಪ್ರಶ್ನೆಗಳನ್ನು ಎದುರಿಸುವ ಬದಲು ಪ್ರಧಾನಿ ಮೋದಿ ಅವರು ಲೋಕಸಭೆಗೆ ಗೈರಾಗಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣವಾಗಿ ಹೆದರಿದ್ದಾರೆ, ಹಾಗಾಗಿ ಅವರು ಸಂಸತ್ತಿಗೆ ಹಾಜರಾಗುವ ಧೈರ್ಯವನ್ನು ಮಾಡುವುದಿಲ್ಲ ಎಂದು ರಾಹುಲ್ ಗಾಂಧಿಯವರು ಮುಂಚಿತವಾಗಿಯೇ ಹೇಳಿದ್ದರು. ಅದರಂತೆ ಮೋದಿ ಅವರು ಲೋಕಸಭೆಯಿಂದ ದೂರ ಉಳಿಯುವ ಮೂಲಕ ತಾನು ಭೀತಿಗೊಂಡಿರುವುದನ್ನು ರುಜು ಮಾಡಿದ್ದಾರೆ. ತನ್ನ ನಿರ್ಧಾರದ ಬಗ್ಗೆ ಆತ್ಮವಿಶ್ವಾಸವಿಲ್ಲದವರು, ಹೀಗೆ ಚರ್ಚೆಯಿಂದ ಯಾವಾಗಲೂ ಹಿಂದೆ ಸರಿಯುವವರು ದೇಶಕ್ಕೆ ಅದ್ಯಾವ ಸಮರ್ಥ ನಾಯಕತ್ವ ನೀಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಅದೇ ರೀತಿ, ಪ್ರಧಾನಿ ಭಾಷಣಕ್ಕೆ ಅವಕಾಶ ನೀಡದೆ ವಂದನಾ ನಿರ್ಣಯವನ್ನು ಅಂಗೀಕರಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪಕ್ಷಪಾತದ ನಡವಳಿಕೆಯು ಸಂಸತ್ತಿನ ಘನತೆಗೆ ಗಂಭೀರ ಚ್ಯುತಿಯನ್ನುಂಟು ಮಾಡಿದೆ. ಸ್ಪೀಕರ್ ಲೋಕಸಭೆಯ ಘನತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಬೇಕೆ ವಿನಃ ಸರ್ಕಾರದ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಬಾರದು ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳ ಬಾಯಿಮುಚ್ಚಿಸಿ, ಪ್ರಧಾನಮಂತ್ರಿಯವರು ಓಡಿ ಹೋದರೆ ಸಂಸತ್ತು ಅರ್ಥಹೀನವಾಗುತ್ತದೆ. ಇದು ಸಂಸತ್ತನ್ನು ದುರ್ಬಲಗೊಳಿಸುವುದು, ಸಾಂವಿಧಾನಿಕ ಹುದ್ದೆಗಳನ್ನು ದುರುಪಯೋಗ ಮಾಡುವುದು ಮತ್ತು ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಇಲ್ಲವಾಗಿಸುವುದು ಬಿಜೆಪಿ-ಆರೆಸ್ಸೆಸ್ ನ ಕುತಂತ್ರದ ಭಾಗವಾಗಿದೆ. ವಿರೋಧಿಗಳನ್ನು ಭಯ ಪಡಿಸುವುದರಿಂದ, ಮೌನವಾಗಿಸುವುದರಿಂದ ಮತ್ತು ಪಲಾಯನ ಮಾಡುವುದರಿಂದ ಪ್ರಜಾಪ್ರಭುತ್ವವು ಉಳಿಯುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular