ಬೆಂಗಳೂರು: ನಿದ್ರೆಯ ಸಮಯದಲ್ಲಿ ಕನಸು ಕಾಣುವುದು ಪ್ರತಿಯೊಬ್ಬರಿಗೂ ಸಹಜ. ಅದರಲ್ಲೂ ಬೆಳಗಿನ ಜಾವ ಬೀಳುವ ಕನಸುಗಳು ನನಸಾಗುತ್ತವೆ ಎಂಬ ಬಲವಾದ ನಂಬಿಕೆ ನಮ್ಮಲ್ಲಿದೆ. ಸಪ್ನ ಶಾಸ್ತ್ರದ ಪ್ರಕಾರ, ನಾವು ಕಾಣುವ ಪ್ರತಿಯೊಂದು ಕನಸಿಗೂ ಒಂದೊಂದು ಗೂಢ ಅರ್ಥವಿರುತ್ತದೆ. ಅದರಲ್ಲೂ ಕನಸಿನಲ್ಲಿ ಚಿನ್ನ, ಬೆಳ್ಳಿ ಅಥವಾ ವಜ್ರದಂತಹ ಅಮೂಲ್ಯ ಲೋಹಗಳು ಕಂಡರೆ, ಅದು ನಿಮ್ಮ ಭವಿಷ್ಯದ ಆರ್ಥಿಕ ಸ್ಥಿತಿಯ ಬಗ್ಗೆ ದೊಡ್ಡ ಸಂಕೇತಗಳನ್ನು ನೀಡುತ್ತದೆ.
ನಿಮ್ಮ ಕನಸಿನಲ್ಲಿ ಚಿನ್ನ ಕಂಡರೆ ಏನಾಗುತ್ತದೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ.
ಚಿನ್ನ ಕಾಣುವುದು: ಶುಭವೋ? ಅಶುಭವೋ?
ಕನಸಿನಲ್ಲಿ ಚಿನ್ನವು ಯಾವ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದರ ಮೇಲೆ ಅದರ ಫಲಿತಾಂಶ ನಿರ್ಧಾರವಾಗುತ್ತದೆ:
ಚಿನ್ನ ಕಳೆದುಹೋದರೆ: ನಿಮ್ಮ ಕನಸಿನಲ್ಲಿ ಚಿನ್ನ ಕಳೆದುಹೋದಂತೆ ಕಂಡರೆ ಅಥವಾ ಚಿನ್ನವನ್ನು ಯಾರಾದರೂ ಕದ್ದಂತೆ ಕಂಡರೆ, ಭವಿಷ್ಯದಲ್ಲಿ ನೀವು ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ.
ಹೊಸ ಚಿನ್ನ ಖರೀದಿ: ಮಾರುಕಟ್ಟೆಯಲ್ಲಿ ಹೊಸ ಆಭರಣ ಖರೀದಿಸುವಂತೆ ಕನಸು ಬಿದ್ದರೆ, ಅದು ನಿಮ್ಮ ಆದಾಯ ಹೆಚ್ಚಳದ ಸಂಕೇತ. ನಿಮ್ಮ ಅದೃಷ್ಟದ ರೇಖೆ ಬಲಗೊಳ್ಳುತ್ತಿದ್ದು, ಕೈಹಾಕಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ ಎಂದರ್ಥ.
ಉಡುಗೊರೆ ಪಡೆಯುವುದು: ಯಾರಾದರೂ ನಿಮಗೆ ಚಿನ್ನವನ್ನು ಉಡುಗೊರೆಯಾಗಿ ನೀಡಿದರೆ, ಶೀಘ್ರದಲ್ಲೇ ನಿಮ್ಮ ಸಂಪತ್ತು ವೃದ್ಧಿಯಾಗಲಿದೆ ಎಂದು ತಿಳಿಯಬಹುದು.
ಬೆಳ್ಳಿ ಮತ್ತು ಇತರ ಲೋಹಗಳ ಅರ್ಥವೇನು?
ಬೆಳ್ಳಿ ಕಂಡರೆ: ಕನಸಿನಲ್ಲಿ ಬೆಳ್ಳಿ ಕಾಣಿಸಿಕೊಂಡರೆ, ನೀವು ಭವಿಷ್ಯದಲ್ಲಿ ಉನ್ನತ ಸ್ಥಾನಮಾನಗಳನ್ನು ತಲುಪುತ್ತೀರಿ ಮತ್ತು ಗೌರವ ಪ್ರಾಪ್ತಿಯಾಗುತ್ತದೆ ಎಂದು ಸಪ್ನ ಶಾಸ್ತ್ರ ಹೇಳುತ್ತದೆ.
ಹಳೇ ಚಿನ್ನ ಮಾರಿ ಹೊಸತು ಖರೀದಿ: ಹಳೆಯ ಒಡವೆ ಮಾರಿ ಹೊಸದನ್ನು ತೆಗೆದುಕೊಳ್ಳುವ ಕನಸು ಬಿದ್ದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತಲೂ ಬಲಗೊಳ್ಳಲಿದೆ ಎಂದರ್ಥ.
ಎಚ್ಚರಿಕೆ ನೀಡುವ ಕನಸುಗಳು
ಕೆಲವೊಮ್ಮೆ ಚಿನ್ನ ಕಾಣುವುದು ಅಶುಭ ಮುನ್ಸೂಚನೆಯೂ ಆಗಿರಬಹುದು:
ಆಭರಣ ಧರಿಸುವುದು: ನೀವೇ ಸ್ವತಃ ಚಿನ್ನ ಅಥವಾ ವಜ್ರದ ಆಭರಣ ಧರಿಸುತ್ತಿರುವಂತೆ ಕನಸು ಕಂಡರೆ ಅದು ಅಶುಭ. ಇದು ಸಂಬಂಧಗಳಲ್ಲಿ ಬಿರುಕು, ಉದ್ಯೋಗ ನಷ್ಟ ಅಥವಾ ಮದುವೆ ಮುರಿದುಬೀಳುವ ಮುನ್ಸೂಚನೆಯಾಗಿರಬಹುದು.
ದೊಡ್ಡ ಖರ್ಚಿನ ಸೂಚನೆ: ಕನಸಿನಲ್ಲಿ ಬೆಲೆಬಾಳುವ ಲೋಹಗಳು ಕಂಡರೆ, ಮುಂಬರುವ ದಿನಗಳಲ್ಲಿ ಕುಟುಂಬದಲ್ಲಿ ಮದುವೆ ಅಥವಾ ದೊಡ್ಡ ಕಾರ್ಯಕ್ರಮಗಳಿಗಾಗಿ ದೊಡ್ಡ ಮಟ್ಟದ ಹಣ ಖರ್ಚಾಗಬಹುದು. ಆದ್ದರಿಂದ ಬಜೆಟ್ ಬಗ್ಗೆ ಪ್ಲಾನ್ ಮಾಡುವುದು ಉತ್ತಮ.
ನೀವು ಬೇರೆಯವರಿಗೆ ಉಡುಗೊರೆ ನೀಡಿದರೆ?
ನೀವು ಯಾರಿಗಾದರೂ ಆಭರಣಗಳನ್ನು ಉಡುಗೊರೆಯಾಗಿ ನೀಡುತ್ತಿರುವಂತೆ ಕನಸು ಕಂಡರೆ, ಅದು ನಿಮ್ಮ ವೃತ್ತಿಜೀವನಕ್ಕೆ ಪೂರಕವಾಗಿದೆ. ಕೆಲಸದಲ್ಲಿ ಬಡ್ತಿ, ಸಂಬಳ ಹೆಚ್ಚಳ ಅಥವಾ ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಇದು ಸೂಚಿಸುತ್ತದೆ.
ಕನಸುಗಳು ಕೇವಲ ಮುನ್ಸೂಚನೆಗಳನ್ನು ನೀಡಬಹುದು, ಆದರೆ ಕಠಿಣ ಪರಿಶ್ರಮವಿಲ್ಲದೆ ಯಶಸ್ಸು ಸಿಗುವುದಿಲ್ಲ. ಕನಸು ನೀಡುವ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಕೆಲಸದ ಬಗ್ಗೆ ಹೆಚ್ಚು ಕ್ರಿಯಾಶೀಲರಾಗಿರುವುದು ಮುಖ್ಯ.

