ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕರೆ ಜೀವನ ಸೆಟಲ್ ಆಯಿತು ಎಂಬುದು ಹಲವರ ಕನಸು. ಅದರಲ್ಲೂ ಜಗತ್ತಿನ ಪ್ರಸಿದ್ಧ ಮನರಂಜನಾ ಸಂಸ್ಥೆ ಡಿಸ್ನಿಯಲ್ಲಿ ಉದ್ಯೋಗ ಪಡೆಯುವುದು ಅನೇಕರಿಗೆ ಹೆಮ್ಮೆಯ ವಿಚಾರ. ಆದರೆ, ಇದೇ ಡಿಸ್ನಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಉದ್ಯೋಗಿಗಳಿಗೆ ಈಗ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಜಾಗತಿಕ ಮನರಂಜನಾ ಕ್ಷೇತ್ರದ ದೈತ್ಯ ವಾಲ್ಟ್ ಡಿಸ್ನಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಸಿದ್ಧತೆ ನಡೆಸುತ್ತಿದೆ ಎಂಬ ವರದಿ ಉದ್ಯೋಗ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಒಂದು ಕಡೆ ಸಿನಿಮಾ, ಟೆಲಿವಿಷನ್, ಸ್ಟ್ರೀಮಿಂಗ್ ಹಾಗೂ ಥೀಮ್ ಪಾರ್ಕ್ಗಳ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ರಂಜಿಸುತ್ತಿರುವ ಡಿಸ್ನಿ, ಮತ್ತೊಂದೆಡೆ ತನ್ನ ಖರ್ಚು ಕಡಿಮೆ ಮಾಡಲು ಉದ್ಯೋಗಿಗಳ ಸಂಖ್ಯೆಯನ್ನೇ ತಗ್ಗಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಕಂಪನಿಯ ಕೆಲವು ಮ್ಯಾನೇಜರ್ಗಳಿಗೆ ವಾರ್ಷಿಕ ವೆಚ್ಚದಲ್ಲಿ ಸುಮಾರು ಶೇ.20ರಷ್ಟು ಉಳಿತಾಯ ಮಾಡುವ ಮಾರ್ಗಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ.
ಸಾವಿರಾರು ಉದ್ಯೋಗಿಗಳಲ್ಲಿ ನಡುಕ ಹುಟ್ಟಿಸಿದ ಶೇ.20ರ ಗುರಿ!
ಡಿಸ್ನಿಯ ಈ ನಿರ್ಧಾರ ಸಾವಿರಾರು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಕಂಪನಿಯು ಯಾವ ವಿಭಾಗಗಳಲ್ಲಿ ಎಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಆದರೆ, ಕೆಲವು ವಿಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಉದ್ಯೋಗ ಕಡಿತ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಸಿಇಒ ಜೋಶ್ ಡಿ’ಅಮಾರೊ ನೇತೃತ್ವದಲ್ಲಿ ಕಂಪನಿಯ ಕಾರ್ಯಾಚರಣೆಯಲ್ಲಿ ದೊಡ್ಡ ಮಟ್ಟದ ಪುನರ್ರಚನೆಗೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಅಂದರೆ, ಕಂಪನಿಯ ಖರ್ಚು ಕಡಿಮೆ ಮಾಡುವುದರ ಜೊತೆಗೆ ಭವಿಷ್ಯದಲ್ಲಿ ಹೆಚ್ಚು ಲಾಭ ತರುವ ಕ್ಷೇತ್ರಗಳ ಮೇಲೆ ಗಮನ ಹರಿಸುವುದು ಡಿಸ್ನಿಯ ಯೋಜನೆ.
ಉದ್ಯೋಗ ಕಡಿತಕ್ಕೆ AI ಕೂಡ ಕಾರಣವೇ?
ಇಂದಿನ ಉದ್ಯೋಗ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (AI) ದೊಡ್ಡ ಬದಲಾವಣೆ ತರುತ್ತಿದೆ. ಅನೇಕ ಕೆಲಸಗಳನ್ನು ತಂತ್ರಜ್ಞಾನದ ಮೂಲಕವೇ ನಿರ್ವಹಿಸುವ ಸಾಧ್ಯತೆ ಹೆಚ್ಚುತ್ತಿದೆ. ಡಿಸ್ನಿಯೂ ಈ ಬದಲಾವಣೆಯ ನಡುವೆ ತನ್ನ ಕಾರ್ಯವೈಖರಿಯನ್ನು ಮರುಪರಿಶೀಲಿಸುತ್ತಿದೆ.
ಇದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಸಿಗದಿರುವುದು, ನೆಟ್ಫ್ಲಿಕ್ಸ್ನಂತಹ ಸಂಸ್ಥೆಗಳಿಂದ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಹಾಗೂ ಡಿಸ್ನಿಯ ಥೀಮ್ ಪಾರ್ಕ್ಗಳಿಗೆ ಅಂತರರಾಷ್ಟ್ರೀಯ ಪ್ರವಾಸಿಗರ ಭೇಟಿ ನಿಧಾನಗೊಳ್ಳುತ್ತಿರುವುದು ಕಂಪನಿಗೆ ಸವಾಲಾಗಿ ಪರಿಣಮಿಸಿದೆ.
ಕೆಲಸ ಕಡಿತ, ಆದರೆ ಹೊಸ ಕ್ಷೇತ್ರಗಳಿಗೆ ಹೂಡಿಕೆ!
ಉದ್ಯೋಗ ಕಡಿತದಿಂದ ಉಳಿಯುವ ಹಣವನ್ನು ಸಂಪೂರ್ಣವಾಗಿ ಉಳಿಸಿಕೊಳ್ಳುವುದಷ್ಟೇ ಡಿಸ್ನಿಯ ಉದ್ದೇಶವಲ್ಲ. ಅದರ ಒಂದು ಭಾಗವನ್ನು ಭವಿಷ್ಯದಲ್ಲಿ ಬೆಳವಣಿಗೆಗೆ ಸಹಕಾರಿಯಾಗುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಕಂಪನಿ ಯೋಜಿಸಿದೆ ಎನ್ನಲಾಗಿದೆ.ಹೊಸ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳ ನಿರ್ಮಾಣ, ತಂತ್ರಜ್ಞಾನ ಅಭಿವೃದ್ಧಿ, ಥೀಮ್ ಪಾರ್ಕ್ಗಳ ಸುಧಾರಣೆ, ಕ್ರೂಸ್ ಹಡಗುಗಳ ವ್ಯವಹಾರದ ವಿಸ್ತರಣೆ ಹೀಗೆ ಒಂದು ಕಡೆ ವೆಚ್ಚ ಕಡಿತಗೊಳಿಸುತ್ತಾ, ಮತ್ತೊಂದೆಡೆ ತನ್ನ ಪ್ರಮುಖ ವ್ಯವಹಾರಗಳನ್ನು ಬಲಪಡಿಸಲು ಡಿಸ್ನಿ ಮುಂದಾಗಿದೆ.
2.31 ಲಕ್ಷ ಉದ್ಯೋಗಿಗಳಿರುವ ಸಂಸ್ಥೆಯಲ್ಲಿ ಮತ್ತೆ ವಜಾ ಭೀತಿ!
2025ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಡಿಸ್ನಿಯಲ್ಲಿ ಸುಮಾರು 2,31,000 ಉದ್ಯೋಗಿಗಳಿದ್ದರು. ಈಗಿನ ಹೊಸ ಉದ್ಯೋಗ ಕಡಿತದಲ್ಲಿ ಎಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.
ಆದರೆ, ಕಳೆದ ಕೆಲವು ವರ್ಷಗಳಿಂದ ಡಿಸ್ನಿಯಲ್ಲಿ ಉದ್ಯೋಗ ಕಡಿತದ ಪ್ರಕ್ರಿಯೆ ಮುಂದುವರಿದಿದೆ. 2026ರ ಸೆಪ್ಟೆಂಬರ್ನಲ್ಲಿ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ವಿಭಾಗಗಳಲ್ಲಿ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿತ್ತು. 2026ರ ಏಪ್ರಿಲ್ನಲ್ಲಿ ಸುಮಾರು 1,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. 2025ರಲ್ಲಿಯೂ ನೂರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದರು.
2023ರಲ್ಲೇ 7,000 ಮಂದಿಗೆ ಕೆಲಸ ಕಳೆದುಕೊಂಡ ಆಘಾತ!
ಡಿಸ್ನಿಯಲ್ಲಿ ಉದ್ಯೋಗ ಕಡಿತ ಹೊಸದೇನಲ್ಲ. 2023ರಲ್ಲಿ ಕಂಪನಿಯು ಬೃಹತ್ ಪುನರ್ರಚನೆ ಕೈಗೊಂಡು ಸುಮಾರು 7,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಆಗಿನ ಸಿಇಒ ಬಾಬ್ ಐಗರ್ ನೇತೃತ್ವದಲ್ಲಿ ಕಂಪನಿಯ ವೆಚ್ಚವನ್ನು 5.5 ಬಿಲಿಯನ್ ಡಾಲರ್ಗಳಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿತ್ತು.ಈಗ ಮತ್ತೆ ಉದ್ಯೋಗ ಕಡಿತದ ವರದಿಗಳು ಹೊರಬರುತ್ತಿರುವುದು ಡಿಸ್ನಿ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಿಸಿದೆ.
ಡಿಸ್ನಿ ಮಾತ್ರವಲ್ಲ, ಮನರಂಜನಾ ಕ್ಷೇತ್ರದಲ್ಲೇ ಉದ್ಯೋಗ ಅಭದ್ರತೆ!
ಜಾಗತಿಕ ಮನರಂಜನಾ ಉದ್ಯಮದಲ್ಲಿ ಉದ್ಯೋಗ ಕಡಿತದ ಅಲೆ ಹೆಚ್ಚಾಗುತ್ತಿದೆ. ಡಿಸ್ನಿ ಮಾತ್ರವಲ್ಲದೆ, ಸ್ಟ್ರೀಮಿಂಗ್ ದೈತ್ಯ ನೆಟ್ಫ್ಲಿಕ್ಸ್ ಹಾಗೂ ವಾರ್ನರ್ ಬ್ರದರ್ಸ್ ಡಿಸ್ಕವರಿಯನ್ನು ಸ್ವಾಧೀನಪಡಿಸಿಕೊಂಡ ಸ್ಕೈಡ್ಯಾನ್ಸ್ ಸಂಸ್ಥೆಗಳಲ್ಲಿಯೂ ಉದ್ಯೋಗ ಕಡಿತ ಕ್ರಮಗಳು ನಡೆದಿವೆ.
ಈಗ ತಂತ್ರಜ್ಞಾನ, ಹೆಚ್ಚುತ್ತಿರುವ ಸ್ಪರ್ಧೆ ಮತ್ತು ವೆಚ್ಚದ ಒತ್ತಡದಿಂದ ಬದಲಾವಣೆಯ ಹಾದಿಯಲ್ಲಿದೆ. ಡಿಸ್ನಿಯ ಈ ಹೊಸ ಯೋಜನೆ ಎಷ್ಟು ಉದ್ಯೋಗಿಗಳ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

