ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಿದ್ದಾರೆ.
ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಈ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಉಪಸ್ಥಿತಿರಿದ್ದರು.
ಶ್ರೀ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಗುರು ಭೈರವೈಕ್ಯ ಮಂದಿರ ಸುಮಾರು 80 ಕೋಟಿಗೂ ಅಧಿಕ ವೆಚ್ಚದಲ್ಲಿ ಭವ್ಯವಾಗಿ ನಿರ್ಮಿಸಲಾದ ಮಂದಿರವಿದಾಗಿದೆ. ಭವ್ಯ ಮಂದಿರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಮಠಾಧೀಶರಾದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗೆ ಸಮರ್ಪಿತವಾಗಿದೆ.
ಸಾಂಪ್ರದಾಯಿಕ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಮಂದಿರ ದಿವಂಗತ ಶ್ರೀಗಳ ಜೀವನ ಮತ್ತು ಪರಂಪರೆಗೆ ಗೌರವವಾಗಿ ನಿಂತಿದೆ. ಮಂದಿರವನ್ನು ಕೇವಲ ಪೂಜ್ಯ ಸ್ಥಳವಾಗಿ ಮಾತ್ರವಲ್ಲದೆ ಭವಿಷ್ಯದ ಪೀಳಿಗೆಗೂ ಸ್ಫೂರ್ತಿಯ ಮೂಲವಾಗಿಯೂ ಕಲ್ಪಿಸಲಾಗಿದೆ. ಹತ್ತು ವರ್ಷಗಳ ಹಿಂದೆಯೇ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಶಿಲ್ಪಿ ಶಂಕರ್ ಸ್ತಪತಿ ಅವರಿಂದ ಕೆತ್ತನೆಯಾಗಿರುವ ಮಂದಿರ ಇದಾಗಿದೆ.
ಇದೇ ವೇಳೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರೊಂದಿಗೆ ಪ್ರಧಾನಿ ಮೋದಿ ‘ಸೌಂದರ್ಯ ಲಹರಿ ಮತ್ತು ಶಿವ ಮಹಿಮ್ನ ಸ್ತೋತ್ರಂ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.

