ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 22 ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ.
ಈ ಸಮಯಕ್ಕೆ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.
ನಿನ್ನೆ ( ಏಪ್ರಿಲ್ 14 ) ನಡೆದ 22ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 32 ರನ್‌ಗಳ ಅಂತರದಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡನೇ ಗೆಲುವು ಸಾಧಿಸಿದ್ದು, ಸೋತ ಕೊಲ್ಕತ್ತಾ ನಾಲ್ಕನೇ ಸೋಲುಂಡು ಇನ್ನೂ ಗೆಲುವಿನ ಖಾತೆ ತೆರೆಯಲಾಗದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಹೀಗೆ ಕೊಲ್ಕತ್ತಾ ನೈಟ್ ರೈಡರ್ಸ್ ನಾಲ್ಕನೇ ಸೋಲನ್ನು ಕಾಣುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕೆಕೆಆರ್ ಕಾಲೆಳೆಯಲು ಆರಂಭಿಸಿದ್ದಾರೆ. ಹೌದು, ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನ ಕೆಕೆಆರ್ ಅಧಿಕೃತ ಖಾತೆಯಲ್ಲಿ ಜೆರ್ಸಿ ಅನಾವರಣದ ವಿಡಿಯೊ ಹಂಚಿಕೊಂಡಿತ್ತು. ಇದರಲ್ಲಿ ಆರ್‌ಸಿಬಿ 49 ರನ್‌ಗಳಿಗೆ ಆಲ್‌ಔಟ್ ಆಗಿದ್ದು ಹಾಗೂ ಮೂರು ಟ್ರೋಫಿ ಗೆದ್ದಿರುವ ತಮ್ಮ ಸಮ ಬರಲು ಆರ್‌ಸಿಬಿ ಮಹಿಳಾ ತಂಡವನ್ನು ಸಹ ಜತೆ ಸೇರಿಸಿಕೊಳ್ಳಬೇಕು ಎಂದು ವಿಡಿಯೊದಲ್ಲಿ ತೋರಿಸಿ ಕಾಲೆಳೆದಿತ್ತು. ಹೀಗಾಗಿ ಟೂರ್ನಿಯಲ್ಲಿ ಐದು ಪಂದ್ಯಗಳನ್ನಾಡಿದ ಬಳಿಕವೂ ಗೆಲುವಿನ ಖಾತೆ ತೆರೆಯದ ಕೆಕೆಆರ್ ತಂಡವನ್ನು ಅವರ ಹಳೆಯ ವಿಡಿಯೊವನ್ನು ನೆನಪಿಸಿ ಆರ್‌ಸಿಬಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

