ಕೇರಳ : ಚುನಾವಣೆ ನಡೆಯಲಿರುವ ಕೇರಳಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರಣಿ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು ಮತ್ತು ಮೂರು ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ನಾಲ್ಕು ಹೊಸ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು.
ಪ್ರಧಾನಿ ಮೋದಿ ಬೆಳಿಗ್ಗೆ 10.25 ರ ಸುಮಾರಿಗೆ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಹಿರಿಯ ಗಣ್ಯರು ಬರಮಾಡಿಕೊಂಡರು.
ನಾಗರಕೋಯಿಲ್-ಮಂಗಳೂರು, ತಿರುವನಂತಪುರಂ-ತಾಂಬರಂ, ತಿರುವನಂತಪುರಂ-ಚರ್ಲಪಲ್ಲಿ ಎಂಬ ಮೂರು ಹೊಸ ಅಮೃತ್ ಭಾರತ್ ರೈಲುಗಳು ಮತ್ತು ತ್ರಿಶೂರ್ ಮತ್ತು ಗುರುವಾಯೂರ್ ನಡುವೆ ಹೊಸ ಪ್ಯಾಸೆಂಜರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿತು. ತಿರುವನಂತಪುರಂನಲ್ಲಿ ಮೋದಿಯನ್ನು ಸ್ವಾಗತಿಸಲು ಜನಸಮೂಹ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿತ್ತು. ಹೂಮಳೆ ಮೂಲಕ ಪ್ರಧಾನಿ ಮೋದಿ ಜನರು ಸ್ವಾಗತ ಕೋರಿದರು. ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಕೇರಳದಲ್ಲಿ ಬಿಗಿ ಭದ್ರತೆ ವಹಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಇಂದು ಕೇರಳ ಅಭಿವೃದ್ಧಿಯತ್ತ ಸಾಗುತ್ತಿದೆ. ಕೇಂದ್ರದ ಪ್ರಯತ್ನಗಳು ಹೊಸ ಚೈತನ್ಯವನ್ನು ಪಡೆದಿವೆ. ಇಂದಿನಿಂದ, ಕೇರಳದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗಿದೆ. ತಿರುವನಂತಪುರಂ ನ್ನು ದೇಶದ ಪ್ರಮುಖ ನವೋದ್ಯಮ ಕೇಂದ್ರವನ್ನಾಗಿ ಮಾಡಲು ಪ್ರಯತ್ನಗಳನ್ನು ಮಾಡಲಾಗಿದೆ. ದೇಶಾದ್ಯಂತ ಬಡವರ ಕಲ್ಯಾಣಕ್ಕಾಗಿ ಕೇರಳದಿಂದ ಒಂದು ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಇಂದು, ಪ್ರಧಾನ ಮಂತ್ರಿ ಸ್ವಾನಿಧಿ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲಾಗಿದೆ. ಇದು ದೇಶಾದ್ಯಂತ ಬೀದಿ ವ್ಯಾಪಾರಿಗಳು, ಪಾದಚಾರಿ ವ್ಯಾಪಾರಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು. ಕೇರಳಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

