ಜನವರಿ 24ರಿಂದ ಸಾಲು-ಸಾಲು ರಜೆ. ಈ ಸಮಯದಲ್ಲಿ ನೀವು ಕೊಡಗು ಜಿಲ್ಲಾ ಪ್ರವಾಸ ಹೊರಟಿದ್ದರೆ ಪ್ರಮುಖವಾದ ಮಾಹಿತಿ ಒಂದಿದೆ. ತೋಟಗಾರಿಕೆ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಇತರೆ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ಜನವರಿ, 24 ರಿಂದ 26ರ ತನಕ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾಹಿತಿ ನೀಡಿದ್ದಾರೆ. ಫಲಪುಷ್ಪ ಪ್ರದರ್ಶನದವನ್ನು ಜನವರಿ 24ರಂದು ಮಧ್ಯಾಹ್ನ 3 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ.
ಫಲಪುಷ್ಪ ಪ್ರದರ್ಶನದ ವಿಶೇಷತೆಗಳು: ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ ಸುಮಾರು 8 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಬೆಡ್‍ಗಳಲ್ಲಿ ಸುಮಾರು 20 ಸಾವಿರ ವಿವಿಧ ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ.
ಕೊಡಗಿನ ಪ್ರಸಿದ್ದ ಶ್ರೀ ಭಗಂಡೇಶ್ವರ ದೇವಸ್ಥಾನದ ಕಲಾಕೃತಿಯನ್ನು 33 ಅಡಿ ಎತ್ತರದಲ್ಲಿ 18 ಅಡಿ ಉದ್ದ, 23 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ.
ಭಾರತ ಏಕೀಕರಣದ ಸಂಕೇತವಾಗಿ ಕನ್ನಡ ಅಕ್ಷರಗಳ ಕಲಾಕೃತಿಗಳನ್ನು 2.5 ಅಡಿ ಮತ್ತು 2.0 ಅಡಿ ಎತ್ತರದಲ್ಲಿ ನಾಲ್ಕು ಕಲಾಕೃತಿಗಳು ಮತ್ತು 4.5 ಅಡಿ ಮತ್ತು 4.0 ಅಡಿ ಎತ್ತರದಲ್ಲಿ 2 ಕಲಾಕೃತಿಗಳನ್ನು ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತಿದೆ.
ಸಂಗೀತ ಕಲಾಕೃತಿಗಳಾದ 2 ಸಂಖ್ಯೆ ತಬಲಾ ಕಲಾಕೃತಿಯನ್ನು 2.5 ಅಡಿ ಎತ್ತರ ಮತ್ತು 3 ಅಡಿ ಎತ್ತರ ಕಲಾಕೃತಿಗಳು, ಪಿಯಾನೊ ಕಲಾಕೃತಿಯನ್ನು 5 ಅಡಿ ಎತ್ತರ, 4 ಅಡಿ ಅಗಲ ಮತ್ತು 3 ಅಡಿ ಉದ್ದದ ಕಲಾಕೃತಿಗಳು, ಹರ್ಪ್ ಕಲಾಕೃತಿಯನ್ನು 6 ಅಡಿ ಎತ್ತರ, 3 ಅಡಿ ಅಗಲ ಕಲಾಕೃತಿಗಳನ್ನು ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ.
ಗಣರಾಜ್ಯೋತ್ಸವದ ಅಂಗವಾಗಿ ಅಮರ್ ಜವಾನ್ ಕಲಾಕೃತಿಯನ್ನು 8 ಅಡಿ ಎತ್ತರದಲಿ ಕಲಾಕೃತಿಗಳನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾರುವ ಹಕ್ಕಿಯ ಕಲಾಕೃತಿಯನ್ನು ವಿವಿಧ ಬಣ್ಣದ ಹೂವಗಳಿಂದ ಅಲಂಕರಿಸಿ ನಿರ್ಮಾಣವಾಗಲಿದೆ. ಮೀನಿನ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಪೈಡರ್ ಮ್ಯಾನ್, ಬ್ಲೂವೇ, ಮಿಕ್ಕಿ ಮೌಸ್, ಡೊರೇಮ್ಯಾನ್ ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಿಸಲಾಗುತ್ತಿದೆ.
ಹಾರ್ಟ್ ಶೇಪ್ ಕಲಾಕೃತಿಯನ್ನು ವಿವಿಧ ಬಣ್ಣದ ಹೂವಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತದೆ. ವಿವಿಧ ಕ್ಷೇತ್ರಗಳ ಗಣ್ಯರು ಗಳ ಕಲಾಕೃತಿಗಳನ್ನು ಹಣ್ಣು/ ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶಿಸಲಾಗುತ್ತದೆ. ವಿವಿಧ ಅಲಂಕಾರಿಕ ಗಿಡಗಳು ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡನೆಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.
ಗಾಂಧಿ ಮೈದಾನದಲ್ಲಿ 60 ಸಂಖ್ಯೆಯ ವಿವಿಧ ಇಲಾಖೆಗಳು, ಏಜೆನ್ಸಿಗಳು, ಸಂಸ್ಥೆಗಳು ಮಳಿಗೆಗಳು ಇರಲಿವೆ. ಇದರಲ್ಲಿ 10 ಮಳಿಗೆಯನ್ನು ತೋಟಗಾರಿಕೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, ಹಾಫ್‍ಕಾಮ್ಸ್, ಕೈಗಾರಿಕೆ, ವಾಣಿಜ್ಯ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಕಾಯ್ದಿರಿಸಲಾಗಿದೆ. 50 ಮಳಿಗೆಯಲ್ಲಿ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತದೆ.
ರೈತರು ಬೆಳೆದಿರುವಂತಹ ವಿಶೇಷವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಾಂಬಾರು ಬೆಳೆಗಳ ಪ್ರದರ್ಶಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂಗಳ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗುತ್ತಿದೆ.

