ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ಟ್ರೇ ವೇಕೆನ್ಸಿ ಸುತ್ತಿನ ಮುಂದುವರಿದ ಆನ್ ಲೈನ್ ಸೀಟು ಹಂಚಿಕೆಗೆ ಮತ್ತೊಂದು ಅವಕಾಶ ನೀಡಿದ್ದು, ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದವರು ಇದರ ಉಪಯೋಗ ಪಡೆಯಬಹುದು.
ಒಟ್ಟು 783 ಸ್ನಾತಕೋತ್ತರ ವೈದ್ಯಕೀಯ ಸೀಟು ಹಂಚಿಕೆಯಾಗದೆ ಉಳಿದಿವೆ. ಈ ಸೀಟುಗಳ ಹಂಚಿಕೆಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಯಾವ ಕಾಲೇಜಿನಲ್ಲಿ, ಯಾವ ಕೋರ್ಸ್ ನ ಸೀಟು ಉಳಿದಿವೆ ಹಾಗೂ ಅದರ ಶುಲ್ಕ ಎಷ್ಟು ಎನ್ನುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ತಮಗೆ ಯಾವ ಕೋರ್ಸ್ ಇಷ್ಟ ಇದೆಯೊ ಅದರ ಪೂರ್ಣ ಶುಲ್ಕದ ಡಿ.ಡಿ ಅಥವಾ ಚೆಕ್ ಸಮೇತ ಮಾರ್ಚ್ 11ರಂದು ಮಧ್ಯಾಹ್ನ 3 ಗಂಟೆಯೊಳಗೆ ಮಲ್ಲೇಶ್ವರದ ಕೆಇಎ ಕಚೇರಿಗೆ ಬರಬೇಕು. ಡಿ.ಡಿ ಅಥವಾ ಚೆಕ್ ಅನ್ನು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮಲ್ಲೇಶ್ವರ, ಬೆಂಗಳೂರು- ಇವರ ಹೆಸರಿನಲ್ಲಿ ಪಡೆಯಬೇಕು.
ಡಿ.ಡಿ ಜತೆಗೆ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಿದವರಿಗೆ ಮಾತ್ರ ಮಾ.11ರಂದು ಮಧ್ಯಾಹ್ನ 12.30ರಿಂದ ಸಂಜೆ 4 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ.
ಮಾ.11ರಂದು ಸಂಜೆ 7 ಗಂಟೆ ನಂತರ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಮಾ.12ರಂದು ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

